ಕಲಬುರಗಿ : ಪಿಎಸ್ಐ ನೇಮಕಾತಿ ಪರೀಕ್ಷೆಯಂತೆ ಕೆಇಎ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಕಿಂಗ್ ಪಿನ್ ಆರ್ ಡಿ ಪಾಟೀಲ್ ಕೆಇಎ ನೇಮಕಾತಿ ಪರೀಕ್ಷೆಯಲ್ಲಿಯೂ ಪ್ರಮುಖ ಆರೋಪಿ ಆಗಿದ್ದಾರೆ.
2021ರಲ್ಲಿ 545 ಪಿಎಸ್ಐ ಹುದ್ದೆಗಳಿಗೆ ನಡೆಸಿದ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿತ್ತು. ಈ ಸಂಬಂಧ ಆರ್ ಡಿ ಪಾಟೀಲ್ ಸೇರಿ ಹಲವರನ್ನು ಬಂಧಿಸಲಾಗಿತ್ತು. ಇದೀಗ ಪಿಎಸ್ಐ ನೇಮಕಾತಿ ಅಕ್ರಮದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿರುವ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ. ಈ ಬಗ್ಗೆ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುವಾಗ ಸಿಕ್ಕಿ ಬಿದ್ದ ಅಭ್ಯರ್ಥಿಗಳೆಲ್ಲ ಆರ್ ಡಿ ಪಾಟೀಲ್ ಹೆಸರು ಬಾಯಿ ಬಿಟ್ಟಿದ್ದಾರೆ.
ಬಬ್ಬೊಬ್ಬರಿಗೊಂದು ರೇಟ್ ಫಿಕ್ಸ್ :ಅಕ್ರಮ ಎಸಗಲು ಆರೋಪಿಗಳ ಗ್ಯಾಂಗ್ ಪ್ರತಿ ಅಭ್ಯರ್ಥಿಗಳ ಬಳಿ ಒಂದು ಮೊತ್ತಕ್ಕೆ ಡೀಲ್ ಮಾಡಿ, ಬಳಿಕ ಅದರ ಅರ್ಧದಷ್ಟು ಹಣವನ್ನು ಮುಂಗಡವಾಗಿ ಪಡೆದುಕೊಂಡು ಬ್ಲೂಟೂತ್ ನೀಡಿತ್ತು. ಇದರಂತೆ ಬೀದರ್ ಜಿಲ್ಲೆಯ ಮಂಠಾಳ ಗ್ರಾಮದ ಆಕಾಶ್ ಎಂಬಾತನಿಗೆ 25 ಲಕ್ಷಕ್ಕೆ ಡೀಲ್ ಮಾಡಿ 8 ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದು ಬ್ಲೂಟೂತ್ ನೀಡಲಾಗಿತ್ತು. ಜೊತೆಗೆ ಕಲಬುರಗಿ ಜಿಲ್ಲೆಯ ಸಂತೊಷ್, ಬಾಬು, ಲಕ್ಷ್ಮಿಪುತ್ರ ಎಂಬವರ ಜೊತೆ ತಲಾ 20 ಲಕ್ಷಕ್ಕೆ ಡೀಲ್ ಮಾಡಿ, 5 ಲಕ್ಷ ರೂಪಾಯಿ ಮುಂಗಡವಾಗಿ ಪಡೆದು ಬ್ಲೂಟೂತ್ ಕೊಟ್ಟಿದ್ದರು. ಈ ಬ್ಲೂಟೂತ್ನೊಂದಿಗೆ ಪರೀಕ್ಷೆ ಬರೆಯಲು ಮುಂದಾಗಿದ್ದ ಅಭ್ಯರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಣ್ಣನಿಗೆ ಸಹಾಯ ಮಾಡಲು ಹೋಗಿ ಜೈಲು ಪಾಲು: ಸಹೋದರನಿಗೆ ಸರ್ಕಾರಿ ನೌಕರಿ ಸಿಗುತ್ತದೆ ಎಂದು ಕಾರಿನಲ್ಲಿ ಕುಳಿತು ಸಹೋದರನಿಗೆ ಉತ್ತರವನ್ನು ಹೇಳುತ್ತಿದ್ದವಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತಳನ್ನು ಚಿಕ್ಕಬಳ್ಳಾಪುರದ ಸರಕಾರಿ ಸ್ಟಾಪ್ ನರ್ಸಿಂಗ್ ನೌಕರಳಾದ ಸೊನ್ನ ಗ್ರಾಮದ ಶೈಲಶ್ರೀ ಎಂದು ಗುರುತಿಸಲಾಗಿದೆ. ಇದೇ ಸಂದರ್ಭ ಅಣ್ಣನ ಪರೀಕ್ಷೆ ಇತ್ತು. ಪರೀಕ್ಷೆಯಲ್ಲಿ ಸಹಾಯ ಮಾಡಲು ಎಂದು ಕಾರಿನಲ್ಲಿ ಕುಳಿತು ಉತ್ತರ ಹೇಳುವಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಬ್ಲೂಟೂತ್ ಡಿವೈಸ್ ಸಹಾಯದಿಂದ ಪರೀಕ್ಷೆ ಬರೆಯಲು ಯತ್ನಿಸಿ ಸಿಕ್ಕಿಬಿದ್ದಿರುವ ಆಕಾಶ ಮಂಠಾಳೆ ಬಿಇ ಓದಿ ಬೆಂಗಳೂರಿನಲ್ಲಿ 80 ಸಾವಿರ ಸಂಬಳ ಪಡೆಯುತ್ತಿದ್ದನಂತೆ. ಆದರೆ ಸರ್ಕಾರಿ ನೌಕರಿ ಪಡಯಲು ಅಕ್ರಮ ನಡೆಸಿದ್ದಾನೆ. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಸರ್ಕಾರ ನಿರ್ಲಕ್ಷ್ಯ ಆರೋಪ :ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗುವುದರ ಬಗ್ಗೆ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಸಂಘದ ಮುಖಂಡ ರವಿಶಂಕರ್ ಪಾಟೀಲ್ ಕಳೆದ 15 ದಿನಗಳ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ಆದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಅಕ್ರಮದ ಕಿಂಗ್ ಪಿನ್ ಆರ್ ಡಿ ಪಾಟೀಲ್ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಪರೀಕ್ಷೆ ಅಕ್ರಮದ ತನಿಖೆಗಾಗಿ ಡಿವೈಎಸ್ ಪಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ.