ಕಲಬುರಗಿ :ಲಾಕ್ಡೌನ್ ಆದೇಶ ಉಲ್ಲಂಘಿಸಿ ಜಿಲ್ಲೆಯ ರಾವೂರ್ ಗ್ರಾಮದಲ್ಲಿ ರಥೋತ್ಸವ ನೆರವೇರಿಸಿದ ಜಾತ್ರೋತ್ಸವ ಸಮಿತಿ ವಿರುದ್ಧ ಹಾಗೂ ಪ್ರಕರಣದಲ್ಲಿ ಬಲಿಪಶುವಾಗಿರುವ ಪಿಎಸ್ಐ ವಿಜಯಕುಮಾರ್ ಬಾವಗಿ ಅವರ ಅಮಾನತು ಆದೇಶವನ್ನು ಹಿಂಪಡೆಯುವಂತೆ ಕೆಲ ಸಂಘಟನಾಕಾರರು ಎಸ್ಪಿ ಯಡಾ ಮಾರ್ಟಿನ್ ಅವರಿಗೆ ಮನವಿ ಮಾಡಿದ್ದಾರೆ.
ಜಾತ್ರೆ ರದ್ದು ಪಡಿಸಿರುವುದಾಗಿ ಸ್ವತಃ ಜಾತ್ರೋತ್ಸವ ಸಮಿತಿ ಪತ್ರಿಕೆ ಹೇಳಿಕೆ ಮೂಲಕ ಸಂದೇಶ ರವಾನಿಸಿತ್ತು. ಪೊಲೀಸರೊಂದಿಗೆ ಸಭೆ ನಡೆಸಿದಾಗಲೂ ಯಾವುದೇ ಕಾರಣಕ್ಕೂ ಜಾತ್ರೆ ನಡೆಸುವುದಿಲ್ಲ ಎಂದು ಹೇಳಿದ ಸಮಿತಿ ಮುಖಂಡರು ಏಕಾಏಕಿ ಬೆಳ್ಳಗೆ 6 ಗಂಟೆಗೆ ಸಾವಿರಾರು ಜನರನ್ನು ಸೇರಿಸಿ ರಥೋತ್ಸವ ನೆರೆವೆರಿಸುವ ಮೂಲಕ ಲಾಕ್ಡೌನ್ ಆದೇಶ ಉಲ್ಲಂಘಿಸಿದ್ದಾರೆ.
ಪಿಎಸ್ಐ ಬಾವಗಿ ಬೆನ್ನಿಗೆ ನಿಂತ ಜನತೆ:
ಪ್ರಕರಣದಲ್ಲಿ ಯಾವುದೇ ತಪ್ಪು ಮಾಡದೇ ಲಾಕ್ಡೌನ್ ಆದೇಶವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ ಪ್ರಾಮಾಣಿಕ ಅಧಿಕಾರಿ ವಿಜಯ್ ಕುಮಾರ್ ಬಾವಗಿ ಅವರನ್ನು ವಿನಾಕಾರಣ ಬಲಿಪಶು ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಅವರು ಪಿಎಸ್ಐ ಬಾವಗಿ ಅವರ ಅಮಾನತು ಆದೇಶವನ್ನು ಹಿಂಪಡೆಯುವಂತೆ ಹಾಗೂ ಲಾಕ್ಡೌನ್ಗೆ ಬೆಲೆ ಕೊಡದೆ ಆದೇಶವನ್ನು ಧಿಕ್ಕರಿಸಿ ರಥೋತ್ಸವ ನೆರವೇರಿಸಿದ ಜಾತ್ರೆ ಸಮಿತಿ ಸದಸ್ಯರನ್ನು ಬಂಧಿಸುವಂತೆ ಸಾಮಾಜಿಕ ಜಾಲತಾಣವಾದ ಫೇಸ್ಬುಕ್, ವಾಟ್ಸ್ಆ್ಯಪ್ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಕೊಡಲೇ ಅಮಾನತು ಆದೇಶ ಹಿಂಪಡೆದು ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.