ಕರ್ನಾಟಕ

karnataka

ತವರಿನತ್ತ ಮುಖ ಮಾಡದ ಕಾಂಗ್ರೆಸ್ ಹಿರಿಯ ನಾಯಕ.. ಕಲಬುರಗಿ ಜನರ ಮೇಲೆ ಖರ್ಗೆ ಮುನಿಸು?

ಸತತವಾಗಿ 9 ಬಾರಿ ವಿಧಾನಸಭೆಗೆ ಹಾಗೂ ಎರಡು ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಮಲ್ಲಿಕಾರ್ಜುನ ಖರ್ಗೆ ಕಲಬುರಗಿ ಜಿಲ್ಲೆ ಜನರ ಮೇಲೆ ಮುನಿಸಿಕೊಂಡಂತೆ ಕಂಡು ಬರುತ್ತಿದೆ. ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದರೂ ಜನ ತನ್ನನ್ನು ಕೈ ಬಿಟ್ಟರಲ್ಲಾ ಎಂಬ ಅಳಕು ಅವರಲ್ಲಿ ಕಾಡುತ್ತಿರುವುದರಿಂದ ಅವರು ಜಿಲ್ಲೆಯತ್ತ ಮುಖಮಾಡುತ್ತಿಲ್ಲ ಎನ್ನಲಾಗುತ್ತಿದೆ.

By

Published : Jun 27, 2021, 10:07 AM IST

Published : Jun 27, 2021, 10:07 AM IST

rajya sabha member mallikarjun kharge anger over kalaburgi people
ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ:ಸೋಲಿಲ್ಲದ ಸರದಾರ ಎಂದು ಹೆಸರು ಮಾಡಿದ್ದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಈಗ ತಮ್ಮ ತವರಾದ ಕಲಬುರಗಿ ಜಿಲ್ಲೆ ಜನರ ಮೇಲೆ ಮುನಿಸಿಕೊಂಡಂತೆ ಕಂಡು ಬರುತ್ತಿದೆ. ಯಾಕಂದ್ರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲಿನ ಕಹಿ ಅನುಭವಿಸಿದ ಖರ್ಗೆ ಆಗಿನಿಂದ ಇಲ್ಲಿಯವರೆಗೆ ಕೇವಲ ಒಂದು ಬಾರಿ ಮಾತ್ರ ಕಲಬುರಗಿಗೆ ಬಂದಿದ್ದಾರೆ ಎನ್ನಲಾಗ್ತಿದೆ.

ಮಲ್ಲಿಕಾರ್ಜುನ ಖರ್ಗೆ ಸತತವಾಗಿ 9 ಬಾರಿ ವಿಧಾನಸಭೆಗೆ ಹಾಗೂ ಎರಡು ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಕರ್ನಾಟಕದ ಹಿರಿಯ ರಾಜಕಾರಣಿಯಾಗಿರುವ ಖರ್ಗೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ, ರಾಜ್ಯದ ಹಲವು ಸಚಿವ ಖಾತೆ, ಕೇಂದ್ರದಲ್ಲಿ ರೈಲ್ವೆ ಸಚಿವರಾಗಿ, ಕಾರ್ಮಿಕ ಮತ್ತು ಉದ್ಯೋಗ ಸಚಿವರಾಗಿ ಅನುಭವಿ ರಾಜಕಾರಣಿಯಾಗಿದ್ದಾರೆ.

ತಮ್ಮ ಅಧಿಕಾರ ಅವಧಿಯಲ್ಲಿ ಕಲಬುರಗಿಗೆ 15 ಸಾವಿರ ಕೋಟಿಯ ಬೃಹತ್ ಇಎಸ್ಐ ಆಸ್ಪತ್ರೆ, ರೈಲ್ವೆ ವಿಭಾಗೀಯ ಕೇಂದ್ರಕ್ಕೆ ಅನುಮೋದನೆ, ಬೆಂಗಳೂರು ಸೇರಿ ಇತರೆ ಜಿಲ್ಲೆಯ ನಾಯಕರು ತಮ್ಮ ಜಿಲ್ಲೆಯ ತೆಗೆದುಕೊಂಡು ಹೋಗಲು ಪ್ರಯತ್ನದ ನಡುವೆ ಕಲಬುರಗಿಗೆ ಕೇಂದ್ರಿಯ ವಿಶ್ವವಿದ್ಯಾಲಯ ತರುವಲ್ಲಿ ಯಶಸ್ವಿಯಾಗಿದ್ದರು. ಹಿಂದುಳಿದ ಹೈದ್ರಾಬಾದ್ ಕರ್ನಾಟಕಕ್ಕೆ 371(ಜೆ) ವಿಧೇಯಕ ತಿದ್ದುಪಡಿ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ಹತ್ತು ಹಲವು ಅಭಿವೃದ್ಧಿ ಯೋಜನೆಗಳನ್ನು ಜಿಲ್ಲೆಗೆ ತಂದಿರುವ ಹೆಮ್ಮೆ ಖರ್ಗೆ ಅವರಿಗಿದೆ. ಕಲಬುರಗಿ ಮಾತ್ರವಲ್ಲದೆ ಯಾದಗಿರಿಯಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು, ಕಲಬುರಗಿಯ ರಿಂಗ್ ರಸ್ತೆಗಳು ಸಹ ಅವರ ಅವಧಿಯಲ್ಲಿ ಮಾಡಿದ ಹೆಗ್ಗಳಿಕೆ ಅವರದಾಗಿದೆ.

ಕೇಂದ್ರ ಸಚಿವರಾದಾಗಲು ಜಿಲ್ಲೆಯನ್ನು ಮರೆಯದೆ ಪದೆ ಪದೆ ಆಗಮಿಸಿ ಜಿಲ್ಲೆಯ ಜನರ ಮೇಲೆ ಕಾಳಜಿ ತೋರುತ್ತಿದ್ದ ನಾಯಕ, ಈಗ ಇದೇ ಜಿಲ್ಲೆಯ ಜನರ ಮೇಲೆ ಮುನಿಸಿಕೊಂಡಿದ್ದಾರೆ. ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದರೂ ಜನ ತನ್ನ ಕೈ ಬಿಟ್ಟರಲ್ಲಾ ಎಂಬ ಅಳಕು ಅವರಲ್ಲಿ ಕಾಡುತ್ತಿದೆ. ಹೀಗಾಗಿ ಅವರು ಜಿಲ್ಲೆಯತ್ತ ಮುಖಮಾಡುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ದಾಖಲೆ ಸೃಷ್ಟಿಸಿದ ಮಲ್ಲಿಕಾರ್ಜುನ ಖರ್ಗೆ:

ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮದಲ್ಲಿ ಜುಲೈ 21, 1942ರಲ್ಲಿ ಜನಿಸಿದ ಖರ್ಗೆ, ಕಲಬುರಗಿಯ ಎನ್‌‌ವಿ ಶಾಲೆ, ಸರ್ಕಾರಿ ಪದವಿ ಕಾಲೇಜಿನಲ್ಲಿ ಪಿಯು ಆರ್ಟ್, ಶೇಠ್ ಶಂಕರ್ ಲಾಲ್ ಲಾಹೋಟಿ ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ. 1969ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು. ಮೊದಲ ಬಾರಿ 1972ರಲ್ಲಿ ಗುರುಮಠಕಲ್ ಮೀಸಲು ಮತಕ್ಷೇದಿಂದ ವಿಧಾನಸಭೆ ಪ್ರವೇಶಿಸಿದ ಅವರು ಸತತ ಎಂಟು ಬಾರಿ ಆಯ್ಕೆಯಾದರು. ಕ್ಷೇತ್ರ ಪುನರ್ ವಿಂಗಡಣೆಯ ನಂತರ ಕಲಬುರಗಿ ಜಿಲ್ಲೆಯ ಚಿತ್ತಾಪೂರ ಮೀಸಲು ಕ್ಷೇತ್ರದಿಂದ 2008 ರಲ್ಲಿ ಸ್ಪರ್ಧಿಸಿದ್ದರು. ಅವರಿಗೆ ಇಲ್ಲಿಯೂ ಮತದಾರರು ಕೈಹಿಡಿದರು. ಇದರೊಂದಿಗೆ ಸತತ ಒಂಬತ್ತನೆಯ ಬಾರಿಗೆ ಶಾಸಕರಾಗಿ ದಾಖಲೆ ಬರೆದರು. ನಂತರ 2009 ಹಾಗೂ 2014ರ ಲೋಕಸಭೆ ಚುನಾವಣೆಯಲ್ಲಿ ಸತತ ಎರಡು ಬಾರಿ ಸಂಸದರಾಗಿ ಆಯ್ಕೆಯಾದರು. 2019ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ರಾಜಕೀಯದ ಶಿಷ್ಯ ಡಾ. ಉಮೇಶ್​ ಜಾಧವ್​ ಎದುರೇ ಸೋಲು ಅನುಭವಿಸಿದರು.

ಮಲ್ಲಿಕಾರ್ಜುನ ಖರ್ಗೆ

ವಾಕ್ ಚತುರತೆ:

ಮಲ್ಲಿಕಾರ್ಜುನ ಖರ್ಗೆ ಅವರ ವಾಕ್ ಚತುರತೆಗೆ ಲೋಕಸಭೆಯ ಸಂಸದೀಯ ನಾಯಕನ ಸ್ಥಾನ ಕೂಡಾ ಒಲಿದುಬಂದಿತ್ತು. ಬಿಜೆಪಿ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕರಾಗಿದ್ದ ಖರ್ಗೆ ಅವರ ವಾಗ್ಬಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ದಂಗಾಗಿ ಹೋಗಿದ್ದರು. ಖರ್ಗೆ ಬಳಿ ಇರುವ ಶಬ್ದ ಭಂಡಾರ, ಮಾತಿನ ಶೈಲಿ ನೋಡಿ ಪ್ರಧಾನಿ ಮೋದಿ, ಖರ್ಗೆ ಅವರ ಬೆನ್ನು ತಟ್ಟಿದ ಪ್ರಸಂಗಗಳಿಗೆ ಸಂಸತ್ ಭವನ ಸಾಕ್ಷಿಯಾಗಿತ್ತು. ದೇಶದ ಸಮಸ್ಯೆಗಳು ಹಾಗೂ ಆಗಬೇಕಿದ್ದ ಬದಲಾವಣೆಗಳನ್ನು ಪ್ರಸ್ತಾಪಿಸುವ ಮೂಲಕ ಐದು ವರ್ಷಗಳ ಕಾಲ ಯಶಸ್ವಿ ಸಂಸದನಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಖರ್ಗೆ ಅವರಿಗಿದೆ.

ಲೋಕಸಭೆ ಫೇಲ್, ರಾಜ್ಯಸಭೆ ಎಂಟ್ರಿ:

ಸತತ ಒಂಬತ್ತು ಬಾರಿ ಶಾಸಕನಾಗಿ, ಎರಡು ಬಾರಿ ಸಂಸದರಾಗಿ ರಾಜ್ಯ ಹಾಗೂ ಕೇಂದ್ರದಲ್ಲಿ ವಿವಿಧ ಸಚಿವ ಖಾತೆ ಹೊಂದಿರುವಾಗ ಕಲಬುರಗಿ ಜಿಲ್ಲೆಗೆ ಹಲವು ಅಭಿವೃದ್ಧಿ ಪರ ಯೋಜನೆಗಳನ್ನು ತಂದಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಭಾರತಿಯ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದ ಡಾ.ಉಮೇಶ್ ಜಾಧವ್ ವಿರುದ್ಧ 95 ಸಾವಿರಕ್ಕೂ ಅಧಿಕ ಮತಗಳಿಂದ ಸೋಲು ಅನುಭವಿಸಿದರು. ಖರ್ಗೆ ಸೋಲಿನ ಬಳಿಕ ಮೋದಿ ಎದುರು ಸಂಸತ್‍ನಲ್ಲಿ ಮಾತನಾಡುವ ಮತ್ತೊಬ್ಬ ಕಾಂಗ್ರೆಸ್ ನಾಯಕ ಹೈಕಮಾಂಡ್‍ಗೆ ಸಿಗಲಿಲ್ಲ ಅನ್ನೋದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅವರ ಪಕ್ಷನಿಷ್ಠೆ, ಅಭಿವೃದ್ಧಿ ಕಾರ್ಯಗಳಿಗೆ ತಲೆಬಾಗಿದ ಕಾಂಗ್ರೆಸ್ ಹೈಕಮಾಂಡ್, ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಪಕ್ಷದ ಏಕೈಕ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ ಗೆಲ್ಲಿಸುವ ಮೂಲಕ ಮತ್ತೊಮ್ಮೆ ಖರ್ಗೆ ಅವರಿಗೆ ದೆಹಲಿ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯಲ್ಲಿ ಸೋಲುಂಡರೂ ರಾಜ್ಯಸಭೆ ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಮುಂದುವರೆಸಿದ್ದಾರೆ. ಆದರೆ ಖರ್ಗೆ ಅವರನ್ನು ಸೋಲಿಸಿದ ಕಲಬುರಗಿ ಜಿಲ್ಲೆ ಜನರು ಮಾತ್ರ ಖರ್ಗೆ ಅವರನ್ನು ಕಳೆದುಕೊಂಡಿದ್ದಾರೆ. ಸೋಲಿನ ನಂತರ ಜಿಲ್ಲೆಗೆ ಬರಲು ಖರ್ಗೆ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಒಂದು ಹಂತದಲ್ಲಿ ಖರ್ಗೆ ಅವರನ್ನು ಸೋಲಿಸಿದ ಜನರೆ ಈಗ ಅವರನ್ನು ನೆನೆಯುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿಯಾದ್ರೂ ಖರ್ಗೆ ಕಲಬುರಗಿಯಿಂದ ಸ್ಪರ್ಧಿಸ್ತಾರಾ ಅಥವಾ ಇಲ್ಲವಾ ಎನ್ನುವುದು ಜನರಿಗೆ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.

For All Latest Updates

TAGGED:

ABOUT THE AUTHOR

...view details