ಕಲಬುರಗಿ/ಜೈಪುರ: ರಾಜಸ್ಥಾನಕ್ಕೆ ಹೊಸ ಮುಖ್ಯಮಂತ್ರಿ ಆಯ್ಕೆಯ ಮಹತ್ತರ ಜವಾಬ್ದಾರಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಹೆಗಲೇರಿದೆ. ಈ ಬಗ್ಗೆ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದ ಸಂದೇಶ ಬರುತ್ತಿದ್ದಂತೆ ಕಲಬುರಗಿ ಜಿಲ್ಲೆ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಖರ್ಗೆ ರಾಜ್ಯಸ್ಥಾನದತ್ತ ಪ್ರಯಾಣ ಬೆಳೆಸಿದ್ದಾರೆ.
ಕಳೆದ ಎರಡು ದಿನಗಳಿಂದ ಮಲ್ಲಿಕಾರ್ಜುನ ಖರ್ಗೆ ಕಲಬುರಗಿ ಜಿಲ್ಲೆ ಪ್ರವಾಸದಲ್ಲಿದ್ದರು. ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಶನಿವಾರ ರಾತ್ರಿ ಸೋನಿಯಾ ಗಾಂಧಿ ಅವರ ಸಂದೇಶ ಬರುತ್ತಿದ್ದಂತೆ ಭಾನುವಾರ ನಸುಕಿನ ಜಾವ ಹೈದರಾಬಾದ್ನಿಂದ ವಿಮಾನಯಾನದ ಮೂಲಕ ರಾಜ್ಯಸ್ಥಾನದ ಜೈಪುರಕ್ಕೆ ತೆರಳಿದರು.
ರಾಜ್ಯಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ಕಾಂಗ್ರೆಸ್ ಸಿದ್ಧಾಂತಕ್ಕೆ ಅನುಗುಣವಾಗಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಮುನ್ನ ಅಶೋಕ್ ಗೆಹ್ಲೋಟ್ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಅನಿವಾರ್ಯತೆ ಇದೆ.