ಕಲಬುರಗಿ: ಶಾಸಕರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅವರಿಗೆ ಬುದ್ಧಿಕೊಡೋ ಶಕ್ತಿ ದೇವರಿಗೆ ಮಾತ್ರ ಇದೆ ಎಂದು ಕಂದಾಯ ಸಚಿವ ಆರ್ ವಿ ದೇಶಪಾಂಡೆ ರಾಜೀನಾಮೆ ನೀಡಿದ ಶಾಸಕರಿಗೆ ಟಾಂಗ್ ನೀಡಿದ್ದಾರೆ.
ಅವರಿಗೆ ಬುದ್ಧಿಕೊಡುವ ಶಕ್ತಿ ದೇವರಿಗೆ ಮಾತ್ರ ಇದೆ.. ಸಚಿವ ದೇಶಪಾಂಡೆ - news kannada
ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಕೈ ಮುಖಂಡರು ಹೇಳಿಕೆ ನೀಡುತ್ತಲೇ ಇದ್ದಾರೆ. ಕಲಬುರಗಿ ಪ್ರವಾಸದಲ್ಲಿರುವ ಕಂದಾಯ ಸಚಿವ ಆರ್ ವಿ ದೇಶಪಾಂಡೆ ಸಹ ಶಾಸಕರ ರಾಜೀನಾಮೆ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ.
ಕಲಬುರಗಿ ಪ್ರವಾಸದಲ್ಲಿರುವ ಸಚಿವರು ಸುದ್ದಿಗಾರರ ಜೊತೆ ಮಾತನಾಡಿ, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಗಾಣಗಾಪೂರ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಉತ್ತಮ ಮಳೆ-ಬೆಳೆ ಆಗಲಿ ಎಂದು ಪ್ರಾರ್ಥಿಸಿಕೊಂಡಿದ್ದೇನೆ. ಸರ್ಕಾರ ಉಳಿಯಲಿ ಎಂದು ಪ್ರಾರ್ಥಿಸಲು ಹೋಗಿಲ್ಲ, ಸಮ್ಮಿಶ್ರ ಸರ್ಕಾರ ಉಳಿಯಬೇಕು ಅಂತಾ ಪ್ರಾರ್ಥನೆ ಮಾಡೋದ್ಕಿಂತ ಶಾಸಕರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅವರಿಗೆ ಬುದ್ಧಿಕೊಡೋ ಶಕ್ತಿ ದೇವರಿಗೆ ಮಾತ್ರ ಇದೆ ಎಂದು ಕಾಲು ಎಳೆದರು.
ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ನಾವು ಆಪರೇಷನ್ ಹಸ್ತ ಮಾಡಲ್ಲ. ಆಪರೇಷನ್ ಮಾಡ್ತೀವಿ ಅಂತಾ ನಮ್ಮ ಯಾವ ನಾಯಕರೂ ಹೇಳಿಲ್ಲ ಎಂದು ಸಮರ್ಥಿಸಿಕೊಂಡ ಸಚಿವರು, ಮಾಧ್ಯಮದವರು ಅಭಿವೃದ್ಧಿ ಕೆಲಸಗಳಿಗೆ ಒತ್ತುಕೊಡಬೇಕು. ಅದನ್ನು ಬಿಟ್ಟು ಇಂತಹ ವಿಷಯಗಳಿಗೆ ಮಹತ್ವ ಕೊಟ್ಟರೆ ಹೇಗೆ ಎಂದು ಮಾಧ್ಯಮಗಳತ್ತ ಬೆರಳು ಮಾಡಿದರು.ಇನ್ನು ಹೊಸದಾಗಿ ರಚನೆಗೊಂಡ ತಾಲೂಕುಗಳ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಜನಪರ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ದೇಶಪಾಂಡೆ ಹೇಳಿದರು.