ಕಲಬುರಗಿ : ರೈಲು ಸಂಚಾರದಲ್ಲಿ ವಿಳಂಬವಾದ ಹಿನ್ನಲೆ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ಆಗಮಿಸಿದ ಅಭ್ಯರ್ಥಿಗಳಿಗೆ ಟ್ರಾಫಿಕ್ ರಹಿತ ಸಾರಿಗೆ ವ್ಯವಸ್ಥೆಯನ್ನು ನಗರ ಪೊಲೀಸರು ಮಾಡಿದ್ದರು.
ಕೆಪಿಎಸ್‌ಸಿ ಪರೀಕ್ಷೆಗೆ ಹಾಜರಾಗಲು ಹಾಸನ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸುಮಾರು 2,400 ಅಭ್ಯರ್ಥಿಗಳು ಕಲಬುರಗಿಗೆ ರೈಲು ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಆಯಾ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಟ್ರಾಫಿಕ್ ರಹಿತ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು.
ಸಾರಿಗೆ ವ್ಯವಸ್ಥೆಗಾಗಿ 18 ಸಿಟಿ ಬಸ್, 100 ಆಟೋಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಆಟೋ ಚಾಲಕರ ಸಂಘದವರು ವಿದ್ಯಾರ್ಥಿಗಳನ್ನು ಉಚಿತವಾಗಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವ ಕಾರ್ಯ ಮಾಡಿದರು.
ಆತಂಕದಲ್ಲಿದ್ದ ವಿದ್ಯಾರ್ಥಿಗಳು ರೈಲು ನಿಲ್ಲುತ್ತಿದ್ದಂತೆ ಓಡೋಡಿ ಆಟೋ ಹಾಗೂ ಬಸ್‌ಗಳತ್ತ ಆಗಮಿಸಿದರು. ಸಾರ್ವಜನಿಕರು, ಪೊಲೀಸರು, ಇಲಾಖೆ ಸಿಬ್ಬಂದಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳನ್ವಯ ಬಸ್ ಹಾಗೂ ಆಟೋದಲ್ಲಿ ಹೋಗಲು ಸಹಾಯ ಮಾಡಿದರು.
ಹಾಸನ-ಸೋಲಾಪುರ ಸೂಪರ್ ಫಾಸ್ಟ್, ಉದ್ಯಾನ್ ರೈಲು ಬೆಳಗ್ಗೆ 6 ಗಂಟೆಗೆ ಕಲಬುರಗಿ ನಗರಕ್ಕೆ ಬರಬೇಕಿತ್ತು. ಬೆಳಗ್ಗೆ ಬಂದು 11 ಗಂಟೆಗೆ ಪರೀಕ್ಷೆಗೆ ಹಾಜರಾಗುವ ಲೆಕ್ಕಾಚಾರದಲ್ಲಿ ವಿದ್ಯಾರ್ಥಿಗಳು ರೈಲು ಮೂಲಕ ಆಗಮಿಸಿದ್ದರು. ಆದರೆ, ತಾಂತ್ರಿಕ ತೊಂದರೆಯಿಂದ ರೈಲುಗಳು ಬೆಳಗ್ಗೆ 6 ಗಂಟೆ ಬದಲಾಗಿ ಮಧ್ಯಾಹ್ನ 1-30ಕ್ಕೆ ಕಲಬುರಗಿಗೆ ತಲುಪಿದೆ.
ಹೀಗಾಗಿ, PWD AE ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಗಳು ಪರದಾಡಿದರು. ಬೆಳಗ್ಗೆ 11 ಗಂಟೆಯ ಪತ್ರಿಕೆ ಹಾಜರಾಗಲು ಅಭ್ಯರ್ಥಿಗಳಿಗೆ ಸಾಧ್ಯವಾಗಿಲ್ಲದ ಕಾರಣ ಮಧ್ಯಾಹ್ನ 2 ಗಂಟೆಗೆ ಎರಡನೇ ಪರೀಕ್ಷೆ ಹಾಜರಾಗಲು ಅಭ್ಯರ್ಥಿಗಳಿಗೆ ಪೊಲೀಸರು ವ್ಯವಸ್ಥೆ ಮಾಡಿಕೊಟ್ಟರು.
ಇದನ್ನೂ ಓದಿ : ರೈಲು ಸಂಚಾರ ವಿಳಂಬ.. ರಾಯಚೂರಿನಲ್ಲಿ ಪರೀಕ್ಷಾರ್ಥಿಗಳಿಂದ ಪ್ರತಿಭಟನೆ