ಕಲಬುರಗಿ:ಪಿಎಸ್ಐ ನೇಮಕ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಕಿಂಗ್ ಪಿನ್ ಆರ್ ಡಿ ಪಾಟೀಲ್ಗೆ ಕಲಬುರಗಿಯ ಸೆಂಟ್ರಲ್ ಜೈಲಿನಿಂದ ಬಿಡುಗಡೆ ಭಾಗ್ಯ ಲಭಿಸಿದೆ. ಕಲಬುರಗಿ ಹೈಕೋರ್ಟ್ ಮೂರು ದಿನಗಳ ಹಿಂದೆ ಕಿಂಗ್ ಪಿನ್ ಸಹೋದರರಾದ ಆರ್.ಡಿ. ಪಾಟೀಲ್ ಮತ್ತು ಮಹಾಂತೇಶ ಪಾಟೀಲ್ ಇಬ್ಬರಿಗೂ ಜಾಮೀನು ನೀಡಿತ್ತು.
ಆರ್.ಡಿ. ಪಾಟೀಲ್ ವಿರುದ್ಧ ಒಂಬತ್ತು ಕೇಸ್ ಇರುವುದರಿಂದ ಅವುಗಳಲ್ಲಿ ಕೆಳ ನ್ಯಾಯಾಲಯದಲ್ಲಿ ಗುಲ್ಬರ್ಗ ವಿವಿ ಠಾಣೆ ಮತ್ತು ಸೆನ್ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರೆಂಟ್ ಜಾರಿಯಾಗಿತ್ತು.
ಈ ಕಾರಣಕ್ಕೆ ಆರ್.ಡಿ. ಪಾಟೀಲ್ ಬಿಡುಗಡೆ ತಡವಾಗಿತ್ತು, ಹೈಕೋರ್ಟ್ ಜಾಮೀನು ನೀಡಿದ ಆದೇಶ ಪ್ರತಿಯೊಂದಿಗೆ ಅವರ ಪರ ವಕೀಲರಾದ ಅಶೋಕ್ ಮೂಲಗೆ ವಾರೆಂಟ್ ರಿ-ಕಾಲ್ ಮಾಡಲು ಜೆಎಂಎಫ್ಸಿ ನ್ಯಾಯಾಲಕ್ಕೆ ಕೋರಿಕೊಂಡು ಪ್ರಕ್ರಿಯೆ ಅಂತ್ಯಗೊಳಿಸಿದರು. ಬಳಿಕ ಶ್ಯೂರಿಟಿ ನೀಡುವುದು ಇತ್ಯಾದಿ ಕಾರ್ಯ ಮುಗಿದ ನಂತರ ಶನಿವಾರ ತಡರಾತ್ರಿ ಜೈಲಿನಿಂದ ಆರ್ ಡಿ ಪಾಟೀಲ್ ಹೊರ ಬಂದಿದ್ದಾರೆ. ಮಹಾಂತೇಶ ಪಾಟೀಲ್ ಬಿಡುಗಡೆಯಾದ ಹೊತ್ತಿನಲ್ಲಿ ಸಂಭ್ರಮಿಸಿದ್ದು ವಿವಾದವಾದ ಹಿನ್ನೆಲೆಯಲ್ಲಿ, ಮತ್ತೆ ಹಾಗೆ ಆಗಬಾರದು ಎಂಬ ಕಾರಣಕ್ಕೆ ಯಾರಿಗೂ ಮಾಹಿತಿ ನೀಡದೆ ಜೈಲಿನಿಂದ ನೇರವಾಗಿ ಆಪ್ತರೊಂದಿಗೆ ಮನೆಗೆ ತೆರಳಿದ್ದಾರೆ.