ಕಲಬುರಗಿ :ಸಿಐಡಿ ಅಧಿಕಾರಿಗಳನ್ನು ತಳ್ಳಿ ಪರಾರಿಯಾಗಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ಪರೀಕ್ಷೆ ಅಕ್ರಮದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ ಐದನೇ ಹೆಚ್ಚುವರಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಆರೋಪಿ ಆರ್.ಡಿ. ಪಾಟೀಲ್‌ಗೆ ಬಂಧನದ ಭೀತಿ ಎದುರಾದ ಹಿನ್ನಲೆ ಸ್ವಯಂಪ್ರೇರಿತ ನ್ಯಾಯಾಲಯಕ್ಕೆ ಬಂದು ಶರಣಾಗಿದ್ದಾನೆ.
14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ :ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷೆ ಅಕ್ರಮದ ಪ್ರಮುಖ ಆರೋಪಿ, ಕಿಂಗ್‌ಪಿನ್ ಎಂದೇ ಹೇಳಲಾಗುತ್ತಿರುವ ಆರ್.ಡಿ.ಪಾಟೀಲ್‌ಗೆ (ರುದ್ರಗೌಡ ಪಾಟೀಲ್) ಎಂಟು ತಿಂಗಳ ನಂತರ ಕಳೆದ ಡಿಸೆಂಬರ್‌ನಲ್ಲಿ ನ್ಯಾಯಾಲಯ ಹತ್ತು ಹಲವು ಷರತ್ತುಗಳು ವಿಧಿಸಿ ಜಾಮೀನು ನೀಡಿತ್ತು. ಷರತ್ತುಗಳನ್ನು ಒಪ್ಪಿಕೊಂಡು ಹೊರಬಂದ ಆರೋಪಿ ಷರತ್ತುಗಳನ್ನು ಉಲ್ಲಂಘನೆ ಮಾಡಿದ್ದು, ವಿಚಾರಣೆಗೆ ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿಲ್ಲ, ವಿಳಾಸ ನೀಡಿದ ಮನೆಯಲ್ಲಿ ಆರೋಪಿ ಸಿಗುತ್ತಿಲ್ಲ, ಮೊಬೈಲ್ ಸಂಖ್ಯೆ ಸ್ವಿಚ್ಆಫ್ ಇರುತ್ತಿದೆ. ನೋಟಿಸ್‌ಗೆ ಸ್ಪಂದನೆ ನೀಡುತ್ತಿಲ್ಲ ಎಂದು ಸಿಐಡಿ ಜಾಮೀನು ರದ್ದು ಕೋರಿ ನ್ಯಾಯಲಯಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನ್ಯಾಯಾಲಯದಲ್ಲಿ ಇನ್ನೂ ಬಾಕಿ ಇತ್ತು.
ಆರೋಪಿಗಳ ಮನೆ ಮೇಲೆ ಇಡಿ ದಾಳಿ :ಇನ್ನೊಂದೆಡೆ ತುಮಕೂರಿನಲ್ಲಿ ದಾಖಲಾದ ಪಿಎಸ್ಐ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಆರ್.ಡಿ.ಪಾಟೀಲ್ ಬಂಧನಕ್ಕೆ ಅರೆಸ್ಟ್ ವಾರೆಂಟ್ ಜಾರಿ ಆಗಿತ್ತು. ಈ ಹಿನ್ನಲೆ ವಾರೆಂಟ್ ಸಮೇತ ಆರೋಪಿ ಬಂಧನಕ್ಕೆ ಸಿಐಡಿ ಕಾಯುತಿತ್ತು. ಈ ಎಲ್ಲದರ ನಡುವೆ ಕಳೆದ ಗುರುವಾರದಂದು ಆರ್.ಡಿ. ಪಾಟೀಲ್ ತನ್ನ ಅಕ್ಕಮಹಾದೇವಿ ಕಾಲೋನಿಯ ಮನೆಯಲ್ಲಿ ಇರುವುದನ್ನು ಖಚಿತಪಡಿಸಿಕೊಂಡ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು, ಬೆಳ್ಳಂಬೆಳಗ್ಗೆ 6 ಗಂಟೆಗೆ ದಾಳಿ ನಡೆಸಿ ರಾತ್ರಿ 11 ಗಂಟೆವರೆಗೆ ವಿಚಾರಣೆಗೆ ಒಳಪಡಿಸಿದ್ದರು. ಅವತ್ತಿನ ದಿನವೇ ಅಕ್ರಮದ ಇತರೆ ಆರೋಪಿಗಳಾದ ಆರ್.ಡಿ.ಪಾಟೀಲ್ ಸಹೋದರ ಮಹಾಂತೇಶ ಪಾಟೀಲ, ಜ್ಞಾನಜ್ಯೋತಿ ಶಾಲೆಯ ಒಡತಿ ದಿವ್ಯಾ ಹಾಗರಗಿ, ಶಾಲೆಯ ಮುಖ್ಯಶಿಕ್ಷಕ ಕಾಶಿನಾಥ ಚಿಲ್ಲ ಮತ್ತು ಮಂಜುನಾಥ ಮೇಳಕುಂದಿಯ ಮನೆಗಳ ಮೇಲೆಯೂ ದಾಳಿ ಮಾಡಿದ್ದರು.