ಕಲಬುರಗಿ:ಪಿಎಸ್ಐ ನೇಮಕಾತಿ ಪರೀಕ್ಷೆ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ಎಸಗಿದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಸೇರಿ 12 ಜನ ಆರೋಪಿಗಳ ಮೇಲೆ ಕೋಕಾ ಆ್ಯಕ್ಟ್ ಜಾರಿಗೊಳಿಸಲಾಗಿದೆ. ಪದೇ ಪದೇ ಒಂದೇ ರೀತಿಯ ಅಪರಾಧ ಕೃತ್ಯ ಮುಂದುವರೆಸುವವರ ವಿರುದ್ದ (ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ) ಕೋಕಾ ಅಸ್ತ್ರ ಪ್ರಯೋಗಿಸಲಾಗುತ್ತದೆ. ಅಶೋಕ ನಗರ ಠಾಣೆ ವ್ಯಾಪ್ತಿಯ ಖಾಸಗಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಬಳಸಿದ ಸಂಬಂಧ ಪರೀಕ್ಷಾ ಅಭ್ಯರ್ಥಿಗಳು ಸೇರಿ 15 ಜನರ ವಿರುದ್ದ ಪ್ರಕರಣ ದಾಖಲಾಗಿತ್ತು. ಮೂವರು ಅಭ್ಯರ್ಥಿಗಳನ್ನು ಬಿಟ್ಟು ಸಿಐಡಿ ಪೊಲೀಸರು ಹನ್ನೆರಡು ಆರೋಪಿಗಳ ವಿರುದ್ಧ ಕೋಕಾ ಆ್ಯಕ್ಟ್‌ನಡಿ ಪ್ರಕರಣ ದಾಖಲಿಸಿದ್ದಾರೆ.
ಕಿಂಗ್‌ಪಿನ್ ಆರ್.ಡಿ.ಪಾಟೀಲ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಗಾಗಿ ಪ್ರಾಂಶುಪಾಲರನ್ನು ಭೇಟಿ ಮಾಡಿದ್ದ ಸಂತೋಷ ಕಟ್ಟೋಳಿ, ಡೀಲ್ ಮಾಡಿಕೊಂಡ ಅಭ್ಯರ್ಥಿಗಳ ಪಟ್ಟಿ ಮಾಡುತ್ತಿದ್ದ ಶಶಿಧರ ಜಮಾದಾರ, ಬ್ಲೂಟೂತ್ ಡಿವೈಸ್ ತರಿಸಿಕೊಂಡು ಅಭ್ಯರ್ಥಿಗಳಿಗೆ ಪೂರೈಸುತ್ತಿದ್ದ ಸಾಗರ್, ಜೇವರ್ಗಿ ತಾಲೂಕು ನೆಲೋಗಿ ಮೂಲದ ಬೆಳಗಾವಿ ಜಿಲ್ಲೆ ಅಥಣಿಯ ಸಣ್ಣ ನೀರಾವರಿ ಇಲಾಖೆಯ ಎಇ ಆಗಿದ್ದ ರುದ್ರಗೌಡ, ರಾಯಲ್ ಪಬ್ಲಿಕ್ ಶಾಲಾ ಕೇಂದ್ರದ ಮುಖ್ಯಸ್ಥನಾಗಿದ್ದ ಚಂದ್ರಕಾಂತ ಬುರಕಲ್, ಕಸ್ಟೋಡಿಯನ್ ಬಸಣ್ಣ ಪೂಜಾರಿ, ಶಿವಕುಮಾರ್, ಸಿದ್ರಾಮ ಕೋಳಿ, ರವಿಕುಮಾರ್, ರಹೀಂ ಚೌಧರಿ, ಬಸವರಾಜ ಎಳವಾರ ವಿರುದ್ಧ ಕೋಕಾ ಜಾರಿ ಮಾಡಲಾಗಿದೆ.