ಕಲಬುರಗಿ :ಪಿಎಸ್‍ಐ ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾದ ಆರೋಪಿ ಕಲಬುರಗಿಯ ಶಾಲೆಯೊಂದರ ಮುಖ್ಯಸ್ಥೆ ದಿವ್ಯಾ ಹಾಗರಗಿ ಅವರಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಅವರು ಪಕ್ಷದ ನಾಯಕಿಯಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ರಾಜಕುಮಾರ ಪಾಟೀಲ ತೇಲ್ಕೂರ ಸ್ಪಷ್ಟಪಡಿಸಿದ್ದಾರೆ.
ದಿವ್ಯಾ ಹಾಗರಗಿ ಅಥವಾ ಯಾರೇ ಅಕ್ರಮದಲ್ಲಿ ಭಾಗವಹಿಸಿದ್ದರೆ ಅದನ್ನು ಪಕ್ಷ ಮತ್ತು ಸರ್ಕಾರ ಸಹಿಸಿಕೊಳ್ಳುವುದಿಲ್ಲ. ಅಕ್ರಮ ನಡೆದಿರುವುದು ಸಾಬೀತಾದರೆ ಶಿಕ್ಷೆ ಆಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರವು ಈ ವಿಷಯದ ಕುರಿತು ಸಿಐಡಿ ತನಿಖೆ ನಡೆಸಲು ಸೂಚಿಸಿದೆ, ತನಿಖೆ ನಂತರ ಸತ್ಯಾಸತ್ಯತೆ ಎಲ್ಲವೂ ಹೊರ ಬರಲಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆಯಲ್ಲಿ ಸದ್ಯ ದಿವ್ಯಾ ನಾಪತ್ತೆ ಆಗಿದ್ದು, ಅವರ ಶೋಧ ಕಾರ್ಯವನ್ನು ಸಿಐಡಿ ಮಾಡುತ್ತಿದೆ. ಅಲ್ಲದೆ ಈ ಸಂಬಂಧ ದಿವ್ಯಾ ಹಾಗರಗಿ ಪತಿ ರಾಜೇಶ್ ಹಾಗೂ ದಿವ್ಯಾ ಹಾಗರಗಿಗೆ ಸೇರಿದ ಜ್ಞಾನಜ್ಯೋತಿ ಶಾಲೆಯ ಮೂವರು ಮಹಿಳಾ ಸಿಬ್ಬಂದಿ ಸೇರಿ ಈಗಾಗಲೇ 8 ಜನರ ಬಂಧನವಾಗಿದೆ.
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣದ ತನಿಖೆಯನ್ನ ಸಿಐಡಿಗೆ ಸರ್ಕಾರ ವಹಿಸಿದೆ. ಅಂತೆಯೇ ಸಿಐಡಿ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಇನ್ನು ತನಿಖೆ ಮುಗಿಯುವವರೆಗೆ ಹೊಸ ಪಿಎಸ್ಐ ನೇಮಕಾತಿಯನ್ನು ಮಾಡಿಕೊಳ್ಳವುದಿಲ್ಲ ಎಂದು ಪೊಲೀಸ್ ಇಲಾಖೆ ಈಗಾಗಲೇ ಸ್ಪಷ್ಟಪಡಿಸಿದೆ.
(ಇದನ್ನೂ ಓದಿ: PSI ನೇಮಕಾತಿ ಅಕ್ರಮ.. ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಪತಿ ರಾಜೇಶ್ ಬಂಧನ..ಪತ್ನಿ ನಾಪತ್ತೆ..)