ಕಲಬುರಗಿ:ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ನೇಮಕಾತಿ ಅಕ್ರಮದ ಕಿಂಗ್‌ಪಿನ್ ಆರ್.ಡಿ.ಪಾಟೀಲ್‌ಗೆ ಇದೀಗ ಹೊಸ ಸಂಕಷ್ಟ ಎದುರಾಗಿದೆ. ಗುರುವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಆರ್.ಡಿ.ಪಾಟೀಲ್ ಮನೆಗೆ ದಾಳಿ ಮಾಡಿದ್ದರು. ಇದಾದ ಬಳಿಕ ರಾತ್ರಿ ಬಂಧನಕ್ಕೆ ತೆರಳಿದ್ದ ಸಿಐಡಿ ಅಧಿಕಾರಿಗಳಿಂದ ಪಾಟೀಲ್ ತಪ್ಪಿಸಿಕೊಂಡು ಮನೆಯಿಂದ ಪರಾರಿಯಾಗಿದ್ದಾರೆ ಎಂದು ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿರುವ ಪ್ರಮುಖ ಆರೋಪಿಗಳ ಮನೆಗಳ ಮೇಲೆ ಗುರುವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ತೆಲಂಗಾಣ ಪಾಸಿಂಗ್ ಹೊಂದಿದ್ದ ಒಂದು ಟೆಂಪೋ ಟ್ರಾವೆಲ್ಲರ್ ಹಾಗೂ ಕಾರುಗಳಲ್ಲಿ ಆಗಮಿಸಿದ ಅಧಿಕಾರಿಗಳು ಆರ್.ಡಿ.ಪಾಟೀಲ್ ಹಾಗೂ ಆತನ ಸಹೋದರ ಮಹಾಂತೇಶ ಪಾಟೀಲ, ಜ್ಞಾನಜ್ಯೋತಿ ಶಾಲೆಯ ಒಡತಿ ದಿವ್ಯಾ ಹಾಗರಗಿ, ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಶಾಲೆಯ ಮುಖ್ಯಶಿಕ್ಷಕ ಕಾಶಿನಾಥ ಚಿಲ್ಲ ಮತ್ತು ಮಂಜುನಾಥ ಮೇಳಕುಂದಿಯ ಮನೆಗಳ ಮೇಲೆ ದಾಳಿ ಮಾಡಿ ರಾತ್ರಿಯವರೆಗೆ ತನಿಖೆ ನಡೆಸಿದ್ದರು ಎಂದು ತಿಳಿದುಬಂದಿದೆ.
ಆರ್.ಡಿ.ಪಾಟೀಲ್‌ಗೆ ಸೇರಿದ ನಗರದ ಅಕ್ಕಮಹಾದೇವಿ ಕಾಲೊನಿಯಲ್ಲಿರುವ ಮನೆ ಶೋಧಿಸಿದ ಇಡಿ ಅಧಿಕಾರಿಗಳು ರಾತ್ರಿ ಹೊರಬಂದ ಬಳಿಕ ಅಲ್ಲಿಗೆ ಸಿಐಡಿ ಅಧಿಕಾರಿಗಳು ತೆರಳಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ದಾಖಲಾದ ಪಿಎಸ್‌ಐ ನೇಮಕಾತಿ ಅಕ್ರಮದ ಕುರಿತಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಪಾಟೀಲ್ನನ್ನು ಬಂಧಿಸಲು ಮುಂದಾದಾಗ, ಯಾವ ಕೇಸು? ನನಗೇನೂ ಗೊತ್ತಿಲ್ಲ ವಿನಾಕಾರಣ ನೀವು ಕಿರುಕುಳ ನೀಡುತ್ತಿದ್ದೀರಿ ಎಂದು ಹೇಳುತ್ತಲೇ ಮನೆಯ ಹಿಂಬಾಗಿಲಿನಿಂದ ಪರಾರಿಯಾಗಿದ್ದಾನೆ ಎಂದು ಅಶೋಕ ನಗರ ಠಾಣೆಗೆ ಸಿಐಡಿ ಡಿಟೆಕ್ಟಿವ್ ಸಬ್ ಇನ್ಸ್‌ಪೆಕ್ಟರ್ ಆನಂದ್ ಸಲ್ಲಿಸಿರುವ ದೂರಿನಲ್ಲಿ ವಿವರಿಸಿದ್ದಾರೆ.