ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಕಲಬುರಗಿ ಡಿಎಆರ್ ಮೈದಾನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅಕ್ರಮದ ಬಗ್ಗೆ ಪಾರದರ್ಶಕ ತನಿಖೆ ನಡೆಯುತ್ತಿದ್ದು ತಪ್ಪಿತಸ್ಥರು ಯಾರೇ ಆದ್ರೂ ಬಿಡುವುದಿಲ್ಲ. ಉತ್ತರ ಪತ್ರಿಕೆಯಲ್ಲಿ ವ್ಯತ್ಯಾಸ ಗೊತ್ತಾದ ತಕ್ಷಣವೇ ಸಿಐಡಿಗೆ ವಹಿಸಿ, ಕಿಂಚಿತ್ತೂ ಸಮಯ ವೇಸ್ಟ್ ಮಾಡದೆ ಸಮಗ್ರ ತನಿಖೆ ನಡೆಸುವಂತೆ ಸಿಐಡಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ನೇಮಕಾತಿ ಅಕ್ರಮದ ಬಗ್ಗೆ ದೂರು ಬಂದ ತಕ್ಷಣ ಪರಿಶೀಲನೆಗೆ ಸೂಚಿಸಿದ್ದೇವೆ. ಕಲಬುರಗಿಯ ಕೆಲವು ಶಿಕ್ಷಣ ಸಂಸ್ಥೆಗಳು ಹಾಗೂ ಮಾಲೀಕರ ಮೇಲೆ ಈಗಾಗಲೇ ಕಾರ್ಯಾಚರಣೆ ಮೂಲಕ ಶೋಧ ನಡೆಸಲಾಗಿದೆ. ಪ್ರಕರಣದಲ್ಲಿ ಭಾಗಿಯಾದವರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಅಫಜಲಪುರ ಕಾಂಗ್ರೆಸ್ ಶಾಸಕ ಎಂ.ವೈ. ಪಾಟೀಲ್ ಅವರ ಗನ್ ಮ್ಯಾನ್ ಅಯ್ಯಣ್ಣಾ ದೇಸಾಯಿ, ಸಹಾಯ ಮಾಡಿದ ಸಿಆರ್‌ಪಿ ಪೇದೆ ರುದ್ರಗೌಡ ಬಂಧನ ಮಾಡಲಾಗಿದೆ. ಸಿಐಡಿಗೆ ಫ್ರೀ ಹ್ಯಾಂಡ್ ಕೊಡಲಾಗಿದ್ದು, ಮತ್ತಷ್ಟು ಆಳವಾಗಿ ಶೋಧಕ್ಕೆ ಸೂಚಿಸಿದ್ದೇನೆ. ಯುಪಿಎಸ್ಸಿ ಮಾದರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಿದ್ರೂ ಕೆಲವರು ಭದ್ರತೆ ಮೀರಿ ವಾಮಮಾರ್ಗ ಅನುಸರಿಸಿದ್ದಾರೆ.