ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ 20 ದಿನಗಳಿಂದ ತಲೆಮರೆಸಿಕೊಂಡಿದ್ದ ಮತ್ತೋರ್ವ ಕಿಂಗ್‌ಪಿನ್, ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಮಂಜುನಾಥ್ ಮೇಳಕುಂದಾ ಭಾನುವಾರ ಸ್ವಯಂ ಪ್ರೇರಿತನಾಗಿ ಸಿಐಡಿ ಕಚೇರಿಗೆ ಆಗಮಿಸಿ ಶರಣಾಗಿದ್ದಾರೆ.
ನೀರಾವರಿ ಇಲಾಖೆಯ ಅಧಿಕಾರಿ ಸಿಐಡಿಗೆ ಶರಣಾಗತಿ ನಗರದ ಐವಾನ್ ಶಾಹಿ ಅತಿಥಿಗೃಹದಲ್ಲಿರುವ ಸಿಐಡಿ ಕಚೇರಿಗೆ ಆಟೋದಲ್ಲಿ ಆಗಮಿಸಿದ ಮಂಜುನಾಥ್ ಅವರು ಕೊರಳಿಗೆ ಒಂದು ಬ್ಯಾಗ್ ಹಾಕಿಕೊಂಡು ಬಂದಿದ್ದಾರೆ. ಈ ವೇಳೆ ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ನನ್ನ ಪಾತ್ರ ಏನೂ ಇಲ್ಲ. ನನಗೆ ಆರೋಗ್ಯ ಸರಿಯಿರಲಿಲ್ಲ. ಹೀಗಾಗಿ ಮಂಗಳೂರಿನಲ್ಲಿದ್ದೆ ಎಂದು ಹೇಳಿಕೆ ನೀಡಿದ್ದಾರೆ.
ಸಿಐಡಿ ಮುಂದೆ ನನ್ನ ತಪ್ಪಿಲ್ಲದ ಬಗ್ಗೆ ವಿವರಿಸುತ್ತೇನೆ. ನನ್ನ ಹೆಸರು ಅನಗತ್ಯವಾಗಿ ತಳಕು ಹಾಕಿಕೊಂಡಿದೆ. ನನಗೆ ಗೊತ್ತಿರುವ ಎಲ್ಲ ವಿಚಾರವನ್ನು ಸಿಐಡಿ ಮುಂದೆ ತಿಳಿಸುತ್ತೇನೆ ಎಂದು ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೋರ್ವ ಮಂಜುನಾಥ ತಮ್ಮ ರವೀಂದ್ರ ಹಾಗೂ ಮುಖ್ಯಶಿಕ್ಷಕ ಕಾಶಿನಾಥ, ಅಭ್ಯರ್ಥಿ ಶಾಂತಾಬಾಯಿ ಇನ್ನೂ ತೆಲೆ ಮರೆಸಿಕೊಂಡಿದ್ದು, ಅವರ ಪತ್ತೆಗೆ ಸಿಐಡಿ 10 ತಂಡಗಳನ್ನು ರಚಿಸಿ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಮೊದಲಾದ ರಾಜ್ಯಗಳಲ್ಲಿ ತೀವ್ರ ಶೋಧ ನಡೆಸುತ್ತಿದೆ.
ಇದನ್ನೂ ಓದಿ:ಸಿಐಡಿಯಿಂದ ದಿವ್ಯಾ ಹಾಗರಗಿ ತೀವ್ರ ವಿಚಾರಣೆ: ಅಕ್ರಮದಲ್ಲಿ ಪ್ರಭಾವಿಗಳ ಹೆಸರು ತಳುಕು?