ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ಕಳೆದ ಮೂರು ತಿಂಗಳಿನಿಂದ ಸಿಐಡಿ ಪೊಲೀಸರ ಕೈಗೆ ಸಿಗದೆ ಓಡಾಡುತ್ತಿದ್ದ ಪಿಎಸ್ಐ ಪರೀಕ್ಷೆ ಅಕ್ರಮದ ಮತ್ತೋರ್ವ ಮಹಿಳಾ ಆರೋಪಿ ಅಂದರ್ ಆಗಿದ್ದಾರೆ. ಪರೀಕ್ಷೆಯಲ್ಲಿ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ ರಚನಾ ಹನುಮಂತ ಮುತ್ತಲಗೇರಿ ಕೊನೆಗೂ ಬಂಧನವಾಗಿದೆ.
ಸಿಐಡಿ ತನಿಖೆ ವೇಳೆ ಓಎಂಆರ್ ಶೀಟ್ ಮತ್ತು ಕಾರ್ಬನ್ ಶೀಟ್‌ನಲ್ಲಿ ವ್ಯತ್ಯಾಸ ಕಂಡುಬಂದು ತಮ್ಮ ವಿರುದ್ಧ ಬೆಂಗಳೂರು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂಬ ಸುಳಿವು ಸಿಗುತ್ತಿದ್ದಂತೆ ರಚನಾ ನಾಪತ್ತೆಯಾಗಿದ್ದರು. ಮೂರು ತಿಂಗಳಿಂದ ಸತತವಾಗಿ ಸ್ಥಳ ಬದಲಾವಣೆ ಮಾಡಿಕೊಂಡು ತಲೆಮರೆಸಿಕೊಂಡಿದ್ದ ರಚನಾಗಾಗಿ ಬೆಂಗಳೂರು, ಕಲಬುರಗಿ ಸಿಐಡಿ ಅಧಿಕಾರಿಗಳು ನಿರಂತರವಾಗಿ ಹುಡುಕಾಟ ನಡೆಸಿದ್ದರು. ಶುಕ್ರವಾರ ಕರ್ನಾಟಕ ಮಹಾರಾಷ್ಟ್ರ ಗಡಿಭಾಗದಲ್ಲಿರುವ ಜಿಲ್ಲೆಯ ಆಳಂದ ತಾಲೂಕಿನ ಹಿರೋಳ್ಳಿ ಚೆಕ್‌ಪೋಸ್ಟ್ ಬಳಿ ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ ನೇತೃತ್ವದ ತಂಡ ರಚನಾರನ್ನು ವಶಕ್ಕೆ ಪಡೆದಿದ್ದಾರೆ.
ಮೊದಲ ಪ್ರಯತ್ನದಲ್ಲೇ ರಾಜ್ಯಕ್ಕೆ ಪ್ರಥಮ ಸ್ಥಾನ:ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯ ರಚನಾ, ಪೊಲೀಸ್ ಇಲಾಖೆ ನಡೆಸಿದ ಪ್ರೊಬೇಷನರಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಆಯ್ಕೆಯಾಗಿದ್ದರು. ಇದೇ ಮೊದಲ ಬಾರಿ ಪೊಲೀಸ್ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದರು. ಮೊದಲ ಪ್ರಯತ್ನದಲ್ಲೇ ಪೇಪರ್ ಒಂದರಲ್ಲಿ 25 ಅಂಕ, ಪೇಪರ್ ಎರಡರಲ್ಲಿ 128.25 ಅಂಕ ಸೇರಿ ಒಟ್ಟು 153.25 ಅಂಕ ಗಳಿಸಿದ್ದರು.