ಕಲಬುರಗಿ:ಬಡರೈತರು ಕಷ್ಟಪಟ್ಟು ಬೆಳೆಯುವ ಬೆಳೆಗಳನ್ನು ಕೊಂಡುಕೊಳ್ಳುವ ಖಾಸಗಿ ಕಂಪನಿಗಳು ಸರಿಯಾಗಿ ಹಣ ಕೊಡದೆ ಸತಾಯಿಸುತ್ತಿರುವುದು ಹೊಸತೇನಲ್ಲ. ಇದೀಗ ಅಂತಹದ್ದೇ ದೂರುಗಳು ಜಿಲ್ಲೆಯಲ್ಲಿ ಕೇಳಿ ಬಂದಿವೆ.
ಕಲಬುರಗಿಯ ಎನ್.ಎಸ್.ಎಲ್ ಸಕ್ಕರೆ ಕಾರ್ಖಾನೆ ರೈತರಿಗೆ ಕಡಿಮೆ ದರ ಕೊಟ್ಟು ಮೋಸ ಮಾಡಿದ್ರೆ, ಯಾದಗಿರಿಯ ಕೋರಗ್ರಿನ್ ಸಕ್ಕರೆ ಕಾರ್ಖಾನೆ ಬಾಕಿ ಹಣ ಕೊಡದೆ ಪೀಡಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಸಕ್ಕರೆ ಕಾರ್ಖಾನೆಗಳ ಅನ್ಯಾಯಕ್ಕೆ ರೋಸಿ ಹೋಗಿರುವ ಬೆಳೆಗಾರರು ಮತ್ತೆ ಹೋರಾಟದ ಹಾದಿ ತುಳಿಯಲು ಮುಂದಾಗಿದ್ದಾರೆ.
200 ರೂ. ಕಡಿಮೆ ಕೊಟ್ಟು ವಂಚನೆ
ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಭೂಸನೂರ ಗ್ರಾಮದ ಬಳಿಯಿರುವ ಎನ್.ಎಸ್.ಎಲ್ ಸಕ್ಕರೆ ಕಾರ್ಖಾನೆ ಕಬ್ಬು ಖರೀದಿಯಲ್ಲಿ ವಂಚಿಸಿದೆ ಎಂದು ಕಬ್ಬು ಬೆಳೆಗಾರರು ಆರೋಪಿಸುತ್ತಿದ್ದಾರೆ. ಕಳೆದ ವರ್ಷ ಒಂದು ಟನ್ ಕಬ್ಬಿಗೆ 2,300 ರೂಪಾಯಿ ದರ ನಿಗದಿಯಾಗಿದೆ. ಆದರೆ, ಎನ್.ಎಸ್.ಎಲ್ ಸಕ್ಕರೆ ಕಾರ್ಖಾನೆಯವರು ಒಂದು ಟನ್ ಕಬ್ಬಿಗೆ 2,100 ರೂ. ಮಾತ್ರ ನೀಡಿ 200 ರೂ. ಮೋಸ ಮಾಡಿದ್ದಾರೆ ಎನ್ನುತ್ತಿದ್ದಾರೆ.
'8 ಕೋಟಿ ರೂ. ಮೋಸ'
ರೈತರ ಪ್ರತಿ ಟನ್ ಕಬ್ಬಿಗೆ 200 ರೂ. ನಂತೆ ಸುಮಾರು 8 ಕೋಟಿ ಹಣ ಕಾರ್ಖಾನೆ ಬಾಕಿ ಉಳಿಸಿಕೊಂಡಿದೆಯಂತೆ. ಹೀಗಾಗಿ, ಬಾಕಿ 8 ಕೋಟಿ ರೂ. ಹಣ ನೀಡುವಂತೆ ರೈತರು ಕಾರ್ಖಾನೆಗೆ ಅಲೆದಾಡುತ್ತಿದ್ದಾರೆ. ಹಲವು ಬಾರಿ ಈ ಬಗ್ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ನ್ಯಾಯ ಒದಗಿಸುವ ಕೆಲಸ ಮಾಡಿಲ್ಲ ಎಂದು ಕಬ್ಬು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ. ಬಾಕಿ ಹಣ ಕೊಡದಿದ್ದರೆ ಉಗ್ರ ಹೋರಾಟದ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.