ಕಲಬುರಗಿ: ನಗರದ ಹಾಗರಗಾ ಕ್ರಾಸ್ ಬಳಿ ಹಾಡಹಗಲೇ ಮಹಿಳಾ ಸಾಮಾಜಿಕ ಕಾರ್ಯಕರ್ತೆಯ ಭೀಕರ ಹತ್ಯೆಗೈದಿರುವ ಘಟನೆ ನಡೆದಿದೆ. ಮಜತ್ ಸುಲ್ತಾನ್ (35) ಕೊಲೆಯಾದ ಮಹಿಳೆ. ಮಹಿಳೆ ಬೈಕ್‌ಗೆ ಕಾರ್‌ನಿಂದ ಗುದ್ದಿ ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರ ಕೊಲೆ ಮಾಡಲಾಗಿದೆ. ನಗರದ ಜಂಜಂ ಕಾಲೋನಿ ನಿವಾಸಿಯಾಗಿದ್ದ ಮಜತ್ ಸುಲ್ತಾನ್, ಸಾಮಾಜಿಕ ಕಾರ್ಯಕರ್ತೆ ಹಾಗೂ ನ್ಯಾಯವಾದಿಯಾಗಿ ಕೆಲಸ ಮಾಡುತ್ತಿದ್ದರು. ಆಸ್ತಿಯ ವಿಚಾರವಾಗಿ ಅಜೀಮ್ ಗೌಂಡಿ, ವಸೀಮ್ ಗೌಂಡಿ, ನಯೀಮ್ ಮತ್ತು ನದೀಮ್ ಸೇರಿ ಕೊಲೆ ಮಾಡಿದ್ದಾರೆಂದು ಕೊಲೆಗೀಡಾದ ಮಜತ್ ಸುಲ್ತಾನ್ ಅವರ ಪತಿ ಸದ್ದಾಂ ಆರೋಪಿಸಿದ್ದಾರೆ.
ನಯೀಮ್ ಮತ್ತು ನದೀಮ್ ಇಬ್ಬರು ಸದ್ದಾಂನ ಸಹೋದರರು ಆಗಿದ್ದು, ಆಸ್ತಿ ವಿಚಾರದಲ್ಲಿ ಕಲಹ ನಡೆದಿತ್ತು. ಇವರಿಬ್ಬರಿಗೆ ಸೋಶಿಯಲ್ ಮಿಡಿಯಾದಲ್ಲಿ ವಾರ್ತೆ ನಡೆಸುತ್ತಿದ್ದ ಅಜೀಮ್ ಗೌಂಡಿ, ವಸೀಮ್ ಗೌಂಡಿ ಸಹಾಯ ಮಾಡ್ತಿದ್ರು. ಆಸ್ತಿ ವಿಚಾರವಾಗಿ ಅವರು ನಮ್ಮ ವಿರುದ್ಧು ದೂರು ದಾಖಲಿಸಿದ್ದ ವೇಳೆ ಈ ಹಿಂದೆ ಎರಡು ಬಾರಿ ನಾವು (ಸದ್ದಾಂ ಹಾಗೂ ಮಜತ್ ಸುಲ್ತಾನ್) ಜೈಲು ವಾಸ ಅನುಭವಿಸಿ ಬಂದಿದ್ದೆವು. ಆದ್ರೆ ನಾವು ಈಗ ದೂರು ದಾಖಲಿಸಿದರೂ ಸಹ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸದ್ದಾಂ ಆರೋಪಿಸಿದ್ದಾರೆ.
ಆಸ್ತಿ ವಿಚಾರದಲ್ಲಿ ಗಲಾಟೆ ನಡೆದ ಹಿನ್ನೆಲೆ ಸದ್ದಾಂ ದಂಪತಿ ಬೇರೆಯ ಬಡಾವಣೆಗೆ ಶಿಫ್ಟ್ ಆಗಿದ್ದು, ಇಂದು ಮನೆ ಖಾಲಿ ಮಾಡಿ ಟಂ ಟಂ ವಾಹನದಲ್ಲಿ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಟಂಟಂ ಹಿಂದೆ ಬೈಕ್ ಮೇಲೆ ಮಜತ್ ಸುಲ್ತಾನ್ ಹೋಗುವಾಗ ಹಗೆತನ ಸಾಧಿಸಿ ಕಾರ್‌ನಲ್ಲಿ ಬಂದ ನಾಲ್ವರು ಡಿಕ್ಕಿ ಹೊಡೆದು ಬೈಕ್ ನೆಲಕ್ಕೆ ಬಿಳುತ್ತಿದ್ದಂತೆ ಕಲ್ಲು ಹಾಕಿ ಕೊಲೆ ಮಾಡಿದ್ದಾರೆಂದು ಮೃತಳ ಪತಿ ಸದ್ದಾಂ ಅಪಾದನೆ ಮಾಡಿದ್ದಾರೆ.