ಕಲಬುರಗಿ:ವಯೋವೃದ್ಧರು, ಹಿರಿಯರು ಕಚೇರಿಗೆ ಅಲೆದಾಡಿ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಪಿಂಚಣಿ ಯೋಜನೆಯ ಸೌಲಭ್ಯ ಪಡೆಯುವುದು ಕಷ್ಠ. ಇಂತಹ ಪ್ರಕರಣಗಳಲ್ಲಿ ಗ್ರಾಮ ಲೆಕ್ಕಿಗರು ಮತ್ತು ಇತರೆ ಸಿಬ್ಬಂದಿಯನ್ನು ವಯೋವೃದ್ಧರು ವಾಸವಿರುವ ಮನೆಗಳಿಗೆ ಕಳುಹಿಸಿ ದಾಖಲೆಗಳನ್ನು ಪಡೆದು ಪರಿಶೀಲಿಸಿ ಅವರಿಗೆ ಪಿಂಚಣಿ ಸೌಲಭ್ಯಗಳ ಮಂಜೂರಾತಿಗೆ ಆದೇಶ ನೀಡಬೇಕೆಂದು ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿ ಐವಾನ್ ಡಿಸೋಜಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಲಬುರಗಿಯಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಐವಾನ್ ಡಿಸೋಜಾ - Kalburgi
ಕಲಬುರಗಿಯಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿ ಐವಾನ್ ಡಿಸೋಜಾ, ಇದೇ ಸಂದರ್ಭದಲ್ಲಿ ಕೆಲ ಫಲಾನುಭವಿಗಳಿಗೆ ವೃದ್ಧಾಪ್ಯ ವೇತನ, ವಿಕಲಚೇತನ ವೇತನ, ವಿಧವಾ ವೇತನ ಮತ್ತು ಸಂಧ್ಯಾ ಸುರಕ್ಷಾ ವೇತನ ಮಂಜೂರಾತಿಯ ಆದೇಶ ಪತ್ರವನ್ನು ವಿತರಿಸಿದರು.
ನಗರದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ 1.90 ಲಕ್ಷ ಜನ ಸಾಮಾಜಿಕ ಪಿಂಚಣಿ ಪಡೆಯುತ್ತಿದ್ದು, ಅವರೆಲ್ಲರೂ ಸಮಪರ್ಕವಾಗಿ ಪಿಂಚಣಿ ಸೌಲಭ್ಯ ಪಡೆಯುತ್ತಿದ್ದಾರೆಯೇ ಎಂಬುದನ್ನು ಗ್ರಾಮ ಲೆಕ್ಕಿಗರಿಂದ ಮಾಹಿತಿ ಪಡೆಯಿರಿ ಎಂದರು. ಸಾಮಾಜಿಕ ಪಿಂಚಣಿಯ ಸಮಸ್ಯೆಗಳು ಮತ್ತು ಕಂದಾಯ ಇಲಾಖೆಯ ಕುಂದುಕೊರತೆಗಳ ನಿವಾರಣೆಗೆ ಜಿಲ್ಲಾಧಿಕಾರಿಗಳು ಹೋಬಳಿ ಮಟ್ಟದಲ್ಲಿ ನಿಯಮಿತವಾಗಿ ಪಿಂಚಣಿ ಮತ್ತು ಕಂದಾಯ ಅದಾಲತ್ ನಡೆಸಿ ಸ್ಥಳದಲ್ಲಿಯೇ ಪರಿಹಾರಕ್ಕೆ ಮುಂದಾಗಬೇಕು. ಪಿಂಚಣಿ ಆದೇಶ ಪಡೆದರು ನಾನಾ ಕಾರಣಗಳಿಂದ ಪಿಂಚಣಿ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗುವುದಿಲ್ಲ. ಇಂತಹ ಅನೇಕ ಸಮಸ್ಯೆಗಳನ್ನು ಅದಾಲತ್‍ನಲ್ಲಿ ಬಗೆಹರಿಸಬಹುದಾಗಿದೆ ಎಂದು ಐವಾನ್ ಡಿಸೋಜಾ ತಿಳಿಸಿದರು.
ಸಭೆಯ ಬಳಿಕ ನಗರ ಐವಾನ್ ಶಾಹಿ ಅತಿಥಿಗೃಹದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾಗಿರುವ ಶಹಾಬಾದ್, ಕಾಳಗಿ, ಕಮಲಾಪುರ ಮತ್ತು ಯಡ್ರಾಮಿಯಲ್ಲಿ ತಾಲೂಕು ಕಚೇರಿಗಳ ನಿರ್ಮಾಣ ಮತ್ತು ಅವುಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರದಿಂದ ₹ 10 ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಕೂಡಲೇ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸ್ಥಳ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗೆ ತಿಳಿಸಿರುವುದಾಗಿ ಅವರು ಹೇಳಿದರು.
TAGGED:
Kalburgi