ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಚಿತ್ತಾಪುರ (ಮೀಸಲು) ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದಾರೆ. ಬಿಜೆಪಿಯ ಎದುರಾಳಿ ಮಣಿಕಂಠ ರಾಠೋಡ್ ಅವರನ್ನು 13,638 ಮತಗಳ ಅಂತರದಿಂದ ಮಣಿಸಿದ್ದಾರೆ. ಪ್ರಿಯಾಂಕ್ ಖರ್ಗೆ 81,088 ಮತಗಳನ್ನು ಪಡೆದುಕೊಂಡಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಎರಡು ಬಾರಿ ಶಾಸಕರಾದವರು. ಮೊದಲನೇ ಬಾರಿ ಶಾಸಕರಾಗಿ ಆಯ್ಕೆ ಆದಾಗಲೇ ಸಚಿವರಾಗಿ ಸೇವೆ ಸಲ್ಲಿಸಿದ ಹಿರಿಮೆ ಅವರದ್ದಾಗಿದೆ. ಈಗ ಮೂರನೇ ಬಾರಿಗೆ ಗೆಲುವನ್ನು ಬರೆದಿದ್ದಾರೆ. ಕಲಬುರಗಿಯ 9 ಕ್ಷೇತ್ರಗಳಲ್ಲಿ 7 ಸ್ಥಾನವನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
22 ನವೆಂಬರ್ 1978 ರಂದು ಕಲಬುರಗಿಯಲ್ಲಿ ತಾಯಿ ರಾಧಾಬಾಯಿ ತಂದೆ ಮಲ್ಲಿಕಾರ್ಜುನ ಖರ್ಗೆ ದಂಪತಿ ಪುತ್ರರಾಗಿ ಜನಿಸಿದ ಪ್ರಿಯಾಂಕ್ ಖರ್ಗೆ, ಮೂಲತಃ ಮಧ್ಯಮ ಕುಟುಂಬಕ್ಕೆ ಸೇರಿದವರು. ಸದ್ಯ ತಂದೆ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದರೆ, ತಾಯಿ ರಾಧಾಬಾಯಿ ಗೃಹಣಿ ಆಗಿದ್ದಾರೆ. ರಾಹುಲ್ ಖರ್ಗೆ ಮತ್ತು ಮಿಲಿಂದ್ ಖರ್ಗೆ ಇಬ್ಬರು ಸಹೋದರರಿದ್ದಾರೆ. ಪ್ರಿಯದರ್ಶಿನಿ ಮತ್ತು ಜಯಶ್ರೀ ಎಂಬ ಇಬ್ಬರು ಸಹೋದರಿಯರೂ ಇದ್ದಾರೆ. ಪ್ರಿಯಾಂಕ್ ಖರ್ಗೆ ಶೃತಿ ಅವರೊಂದಿಗೆ ಮದುವೆ ಆಗಿದ್ದು, ಅಮಿತಾಬ್ ಹಾಗೂ ಆಕಾಂಕ್ಷಾ ಎಂಬ ಮುದ್ದಾದ ಮಕ್ಕಳನ್ನು ಹೊಂದಿದ್ದಾರೆ. ಪ್ರಿಯಾಂಕ್ ಖರ್ಗೆ ತಮ್ಮ ಹೆಸರಿನಲ್ಲಿ 14.49 ಕೋಟಿ ಆಸ್ತಿ ಹೊಂದಿದ್ದಾರೆ. ಖರ್ಗೆ ಕುಟುಂಬದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ಮಾತ್ರ ರಾಜಕೀಯ ಕ್ಷೇತ್ರದಲ್ಲಿದ್ದಾರೆ.
ಬಿಎ ಪದವೀಧರರಾದ ಪ್ರಿಯಾಂಕ್ ಖರ್ಗೆ, ಗ್ರಾಫಿಕ್ಸ್ ಅಂಡ್ ಅನಿಮೇಷನ್ ವೃತ್ತಿಪರ ಕೋರ್ಸ್ ವ್ಯಾಸಂಗ ಮಾಡಿದ್ದಾರೆ. ತಮ್ಮ ವಿದ್ಯಾರ್ಥಿ ಜೀವನದಲ್ಲಿರುವಾಗಲೇ 1998ರಲ್ಲಿ ಭಾರತದ ರಾಷ್ಟ್ರೀಯ ವಿದ್ಯಾರ್ಥಿ ಸಂಘದ (NSUI) ಕಾರ್ಯಕರ್ತರಾಗಿ ರಾಜಕೀಯ ಪ್ರವೇಶ ಮಾಡಿದ್ದು ಅವರ ವರ್ಚಸ್ಸಿಗೆ ಸಾಕ್ಷಿ. NSUI ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ, 2011 ರಿಂದ 2014ರವರೆಗೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.