ಕಲಬುರಗಿ:ಖರ್ಗೆ ಕುಟುಂಬದ ಹೆಂಡತಿ, ಮಕ್ಕಳನ್ನು ಸಾಫ್ (ಹತ್ಯೆ) ಮಾಡುತ್ತೇನೆ ಎಂದು ಮಣಿಕಂಠ ರಾಠೋಡ್ ಹೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್ ವಿಚಾರವನ್ನು ಪ್ರಿಯಾಂಕ್ ಖರ್ಗೆ ಅವರು ತಮ್ಮ ಪ್ರಚಾರದ ಕಾರ್ಯಕ್ರಮದಲ್ಲಿ ಪಸ್ತಾಪ ಮಾಡಿದರು. ''ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಮತ್ತು ಕುಟುಂಬಸ್ಥರು ಕೊಲೆ ಮಾಡುವಂತ ತಪ್ಪು ಮಾಡಿದ್ದಾದರೂ ಏನು ಎಂಬುದನ್ನು ಮತದಾರರೇ ಹೇಳಬೇಕು ಎಂದು ಹೇಳಿದರು.
ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಕಲಗುರ್ತಿ ಹಾಗೂ ಮುಚ್ಕೇಡ ಗ್ರಾಮಗಳಿಗೆ ಭೇಟಿ ನೀಡಿ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಅವರು ಮಾತನಾಡಿದರು. ಮತದಾರರ ಮುಂದೆ ಆಡಿಯೋ ವಿಚಾರವನ್ನು ಪ್ರಸ್ತಾಪಿಸಿದ ಅವರು, ''ಕಳೆದ 50 ವರ್ಷದಿಂದ ಕಲಬುರಗಿ ಜನರಿಗಾಗಿಯೇ ನಮ್ಮ ತಂದೆ ದುಡಿಯುತ್ತಿದ್ದಾರೆ. ಅಂತಹವರನ್ನು ಸಾಯಿಸುತ್ತಾನಂತೆ. ಖರ್ಗೆ ಸಾಹೇಬರು, ನಮ್ಮ ತಾಯಿ, ನಾನು ಹಾಗೂ ನನ್ನ ಪತ್ನಿ, ಮಕ್ಕಳು ಏನು ತಪ್ಪು ಮಾಡಿದ್ದೇವೆ ಅಂತ ನಮ್ಮನ್ನು ಸಾಫ್ (ಹತ್ಯೆ) ಮಾಡುತ್ತೀರಿ?'' ಎಂದು ಗರಂ ಆದರು. ''ನಾನು ಇಂತಹ ಹತ್ತು ಮಣಿಕಂಠ ರಾಠೋಡ್ಗಳನ್ನು ನೋಡಿದ್ದೇನೆ. ಇಂತಹವುಗಳಿಗೆ ನಾನು ಹೇದರುವುದಿಲ್ಲ'' ಎಂದು ಕಿಡಿಕಾರಿದರು.
ಇದನ್ನೂ ಓದಿ:ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹುಬ್ಬಳ್ಳಿಗೆ ಆಗಮನ.. ಕಾಂಗ್ರೆಸ್ ಪರ ಪ್ರಚಾರ
ನಿಮ್ಮ ಸೇವೆ ಮಾಡಲು ಅವಕಾಶ ಕೊಡಿ:''ಇಂದಿನ ಯುವಕರ ಭವಿಷ್ಯ ರೂಪಿಸುವ ಅಗತ್ಯವಿದೆ. ಮಹಿಳೆಯರಿಗೆ ಸುರಕ್ಷತೆಯಂತಹ ವಾತಾವರಣ ನಿರ್ಮಿಸಬೇಕಾಗುತ್ತದೆ. ಬಿಜೆಪಿ ಅಭ್ಯರ್ಥಿಗೆ ಇಂತಹ ಯಾವುದೇ ಹಿತಾಸಕ್ತಿಗಳಿಲ್ಲ. ಅಕ್ಕಿ ಹಾಗೂ ಹಾಲಿನ ಪುಡಿಯನ್ನು ಅಕ್ರಮ ಸಾಗಣೆ ಮಾಡುವ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ 40 ಕೇಸುಗಳು ದಾಖಲಾಗಿವೆ. ಇಂತಹ ಅಭ್ಯರ್ಥಿ ಶಾಸಕನಾದರೆ ನಮ್ಮ ಚಿತ್ತಾಪುರ ಕ್ಷೇತ್ರದ ಯುವಕರ ಭವಿಷ್ಯಕ್ಕೆ ಕತ್ತಲು ಆವರಿಸಲಿದೆ. ಇದರಿಂದ ನೀವೆಲ್ಲ ಪ್ರಬುದ್ಧತೆಯಿಂದ ಮತದಾನ ಮಾಡಿ. ಅಭಿವೃದ್ಧಿ ಪರ ಚಿಂತನೆಯುಳ್ಳ ನನ್ನನ್ನು ಆಯ್ಕೆ ಮಾಡಿ ಕಳುಹಿಸಿ, ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ'' ಎಂದು ಮನವಿ ಮಾಡಿದರು.