ಕಲಬುರಗಿ :ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ರೂ 5,000 ಕೋಟಿ ನೀಡುವುದಾಗಿ ನಿನ್ನೆ ಸಿಎಂ ಹೇಳಿ ಮೂಗಿಗೆ ತುಪ್ಪ ಸವರಿ ಹೋಗಿದ್ದಾರೆ. ಮುಂದೆ ಚುನಾವಣೆ ಬರುತ್ತಿದೆ. ಹಾಗಾಗಿ ಈ ಅನುದಾನ ಬಿಡುಗಡೆ ಅಸಾಧ್ಯ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆಕೆಆರ್ ಡಿಬಿಗೆ ಘೋಷಿತ ಅನುದಾನ ರೂ 3,000 ಕೋಟಿಯಲ್ಲಿ ಕೇವಲ ರೂ. 1,500 ಕೋಟಿ ಮಾತ್ರ ಬಿಡುಗಡೆ ಮಾಡಿ ಉಳಿದ ರೂ 1,500 ಕೋಟಿಯನ್ನು ಎಸ್ಡಿಪಿನಲ್ಲಿ ಬಿಡುಗಡೆ ಮಾಡದೇ ಮಹಾತ್ವಾಕಾಂಕ್ಷೆ ತಾಲೂಕುಗಳೆಂದು ಮರುನಾಮಕರಣ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ಆ ಅನುದಾನ ಹೆಡ್ ಆಫ್ ಅಕೌಂಟ್ಗೆ ಬರುವುದಿಲ್ಲ. ಘೋಷಿತ ಅನುದಾನವನ್ನೇ ಸರಿಯಾಗಿ ಬಿಡುಗಡೆ ಮಾಡದ ಸಿಎಂ ಮತ್ತೆ ರೂ. 5,000 ಕೋಟಿ ನೀಡುವುದಾಗಿ ಹೇಳಿದ್ದಾರೆ ಎಂದರು.
ಐದು ಸಿಎಂಗಳ ಕೊಡುಗೆ ಏನು? :ಸ್ಥಳೀಯ ಮುಖಂಡರ ನಿರಾಸಕ್ತಿಯಿಂದ ಕಲಬುರಗಿಯಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಸಿಎಂ ಹೇಳಿದ್ದಾರೆ. ನಿಮ್ಮ ಅವಧಿಯಲ್ಲಿ ಐವರು ಸಿಎಂ ಕೊಟ್ಟಿದ್ದೀರಲ್ಲ, ನಿಮ್ಮ ಕೊಡುಗೆ ಏನಿದೆ? ನೀವು ನಿನ್ನೆ ಉದ್ಘಾಟನೆ ಮಾಡಿದ ಕಮೀಷನರ್ ಕಚೇರಿಗೆ ಅಡಿಗಲ್ಲು ಹಾಕಿದ್ದೇ ನಾನು. ನೀವು ಬಂದಿಳಿದ ವಿಮಾನ ನಿಲ್ದಾಣ ನಿರ್ಮಿಸಿದ್ದೇ ನಮ್ಮ ಅವಧಿಯಲ್ಲಿ. ನಿನ್ನೆ ನೀವು ಓಡಾಡಿದ ರಸ್ತೆ ನಿರ್ಮಾಣ ಮಾಡಿದ್ದೇ ನಾವು ಎಂದು ಪ್ರಿಯಾಂಕ್ ತಿರುಗೇಟು ನೀಡಿದರು.
ನಿಮ್ಮ ಶಾಸಕರ ಸಾಧನೆ ಏನು? : ಯುಪಿಎ ಅವಧಿಯಲ್ಲಿ ಮಂಜೂರಾಗಿದ್ದ ರೈಲ್ವೆ ವಲಯ, ನಿಮ್ಸ್, ಜವಳಿ ಪಾರ್ಕ್, ಏಮ್ಸ್, ಮೇಕ್ ಇನ್ ಇಂಡಿಯಾ, ಇಎಸ್ ಐ ಮೇಲ್ದರ್ಜೆಗೆ ಏರಿಸುವ ಯೋಜನೆಗಳೆಲ್ಲ ಏನಾದವು?. ಕಲಬುರಗಿ ಸಂಸದ ಉಮೇಶ್ ಜಾಧವ್ ಈ ಮೂರು ವರ್ಷದಲ್ಲಿ ಏನು ಮಾಡಿದ್ದಾರೆ?. ಮೋದಿ ಅವರ ಮನ್ ಕಿ ಬಾತ್ನ್ನು ಕನ್ನಡದಲ್ಲಿ ಅನುವಾದ ಮಾಡಿ ಹೇಳಿದ್ದು ಹಾಗೂ ಕೇಂದ್ರಿಯ ವಿವಿಯನ್ನು ಆರ್ಎಸ್ಎಸ್ ಕೇಂದ್ರವನ್ನಾಗಿ ಪರಿವರ್ತನೆ ಮಾಡುತ್ತಿರುವುದೇ ಇವರ ಸಾಧನೆಯಾಗಿದೆ ಎಂದು ಲೇವಡಿ ಮಾಡಿದರು.