ಕಲಬುರಗಿ: ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕಲಬುರ್ಗಿಯ ಶಶಿಕಲಾ ಟೆಂಗಳಿ ಸ್ವತಃ ತಾವೇ ಮಾಸ್ಕ್ ತಯಾರಿಸೋ ಮೂಲಕ ಗಮನ ಸೆಳೆದಿದ್ದಾರೆ.
ಮಾಸ್ಕರ್ ತಯಾರಿಕೆಯಲ್ಲಿ ಶಶಿಕಲಾ ಟೆಂಗಳಿ ಮನೆಯಲ್ಲಿದ್ದಾಗ ಮಾಸ್ಕ್ ಹೊಲಿಯುತ್ತಿರೋ ಶಶಿಕಲಾ, ಗ್ರಾಮೀಣ ಪ್ರದೇಶಗಳಿಗೆ ತೆರಳಿ ಅವುಗಳನ್ನು ವಿತರಿಸೋ ಮೂಲಕ ಮಾಸ್ಕ್ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಕಲಬುರ್ಗಿಯ ಎನ್‌ಜಿಒ ಕಾಲೋನಿಯಲ್ಲಿರುವ ಮನೆಯಲ್ಲಿ ನಿತ್ಯ ನೂರಾರು ಮಾಸ್ಕ್‌ಗಳನ್ನ ಹೊಲಿಯುತ್ತಿದ್ದಾರೆ. ಹೊಲಿದ ಮಾಸ್ಕ್‌ಗಳನ್ನು ಮಹಿಳೆಯರಿಗೆ ಹಂಚುತ್ತಿದ್ದಾರೆ.
ತಾವೇ ಖುದ್ದಾಗಿ ಹೊಲಿಯುವ ಮೂಲಕ ಶಶಿಕಲಾ ಟೆಂಗಳಿ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಕೆಲ ಸ್ವಸಹಾಯ ಸಂಘಗಳ ಮೂಲಕವೂ ಮಾಸ್ಕ್ ತಯಾರಿಕೆ ಮಾಡಿಸುತ್ತಿರುವ ಇವರು, ಮಹಿಳೆಯರಿಗೆ ಹಂಚೋ ಕೆಲಸ ಮಾಡುತ್ತಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಮಾಸ್ಕ್ ಬಗ್ಗೆ ಜಾಗೃತಿಯಿಲ್ಲ. ಹೀಗಾಗಿ ಹಳ್ಳಿ ಹಳ್ಳಿಗೆ ಹೋಗಿ ಮಾಸ್ಕ್‌ಗಳನ್ನು ಕೊಟ್ಟು ಜಾಗೃತಿ ಮೂಡಿಸಲಾಗುತ್ತಿದೆ. ಸಂಕಷ್ಟ ಕಾಲದಲ್ಲಿ ಕೈಲಾದಷ್ಟು ಸೇವೆ ಮಾಡೋದು ನನ್ನ ಗುರಿ. ಹೊಲಿಗೆ ಬರುತ್ತಿರೋದ್ರಿಂದ ಮಾಸ್ಕ್ ಹೊಲಿದು ಕೊಡ್ತಿದ್ದೇನೆ. ಮಹಿಳಾ ಸ್ವಸಹಾಯ ಸಂಘಗಳ ಮೂಲಕವೂ ಮಾಸ್ಕ್ ಸಿದ್ದಪಡಿಸಿ ವಿತರಣೆ ಮಾಡುತ್ತಿದ್ದೇನೆ ಎಂದು ಶಶಿಕಲಾ ಟೆಂಗಳಿ ತಿಳಿಸಿದ್ದಾರೆ.
ದೇವದಾಸಿ ಮಹಿಳೆಯರಿಗೆ ಹೆಚ್ಚಿನ ಮಾಸ್ಕ್ ವಿತರಣೆ :ದೇವದಾಸಿ ಮಹಿಳೆಯರಿಗೆ, ಬಡವರಿಗೆ ಮಾಸ್ಕ್ ವಿತರಣೆ ಮಾಡುತ್ತಿದ್ದೇವೆ. ಆಶಾ ಕಾರ್ಯಕರ್ತೆಯರ ಮೂಲಕ ಮಾಸ್ಕ್ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ. ಮಹಿಳಾ ಅಭಿವೃದ್ಧಿ ನಿಗಮದ ಮೂಲಕವೂ ಮಾಸ್ಕ್ ತಯಾರಿಸಿ, ವಿತರಿಸಲಾಗುತ್ತಿದೆ. ರಾಜ್ಯದ 14 ಜಿಲ್ಲೆಗಳಲ್ಲಿ 44 ಸಾವಿರ ದೇವದಾಸಿಯರಿದ್ದು, ಪ್ರತಿಯೊಬ್ಬರಿಗೆ ಎರಡೆರಡು ಮಾಸ್ಕ್ ವಿತರಣೆ ಮಾಡಾಗುತ್ತಿದೆ. ಬಡ ಮಹಿಳೆಯರಿಗೂ ಮಾಸ್ಕ್ ಕೊಟ್ಟು ಕೊರೊನಾ ಸೋಂಕಿನಿಂದ ದೂರವಿರುವಂತೆ ಜಾಗೃತಿ ಮೂಡಿಸಲಾಗುತ್ತಿದೆ.