ಕಲಬುರಗಿ:ಕೊರೊನಾ ಹಿನ್ನೆಲೆ ಮುಂದೂಡಲಾಗಿದ್ದ ಎಸ್ಎಸ್ಎಲ್ಸಿ ಪರೀಕ್ಷೆಗೆ ಕ್ಷಣಗಣನೆ ಆರಂಭಗೊಂಡಿದೆ. ಕೊರೊನಾ ಆತಂಕದ ನಡುವೆಯೂ ಸರ್ಕಾರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪರೀಕ್ಷೆ ನಡೆಸಲು ಮುಂದಾಗಿದೆ.
ಕೊರೊನಾ ಹಾಟ್ಸ್ಪಾಟ್ ಕಲಬುರಗಿಯಲ್ಲಿ SSLC ಪರೀಕ್ಷೆಗೆ ಸಿದ್ಧತೆ : ಸೆಕ್ಷನ್ 144 ಜಾರಿ - kalburgi sslc exam news updates
ನಾಳೆ ಎಸ್ಎಸ್ಎಲ್ಸಿ ಪರೀಕ್ಷೆ ಹಿನ್ನೆಲೆ ಕೊರೊನಾ ಹಾಟ್ಸ್ಪಾಟ್ ಆಗಿರುವ ಕಲಬುರಗಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷಾರ್ಥಿಗಳಲ್ಲಿ ಜ್ವರ ಕೆಮ್ಮು, ಶೀತ, ಲಕ್ಷಣಗಳು ಕಾಣಿಸಿಕೊಂಡಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಎರಡು ಕೊಠಡಿ ವ್ಯವಸ್ಥೆ ಮಾಡಲಾಗಿದೆ.
ಈ ನಿಟ್ಟಿನಲ್ಲಿ ಕೊರೊನಾ ಹಾಟ್ಸ್ಪಾಟ್ ಕಲಬುರಗಿ ಜಿಲ್ಲೆಯಲ್ಲೂ ಸಹ SSLC ಪರೀಕ್ಷೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ನಾಳೆ ಜಿಲ್ಲೆಯಲ್ಲಿ ಒಟ್ಟು 43,175 ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲ್ಲಿದ್ದಾರೆ. ಜಿಲ್ಲಾದ್ಯಂತ 136 ಪರೀಕ್ಷಾ ಕೇಂದ್ರಗಳನ್ನ ಸ್ಥಾಪಿಸಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಲು ಬಸ್ಗಳ ವ್ಯವಸ್ಥೆ ಕೂಡ ಮಾಡಲಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗಾಗಿ 36 ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಯ ಹಾಲ್ ಟಿಕೆಟ್ ತೋರಿಸಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.
ಇನ್ನೂ ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಪರೀಕ್ಷಾ ಕೇಂದ್ರಗಳ ಸುತ್ತಲೂ ಸ್ವಚ್ಛತೆ ಕಾಪಾಡಲಾಗುತ್ತಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಕೊಠಡಿಗಳಲ್ಲಿ ಒಂದು ಬೆಂಚ್ನಲ್ಲಿ ಒಬ್ಬ ವಿದ್ಯಾರ್ಥಿಗೆ ಮಾತ್ರ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಎಕ್ಸಾಂಗೆ ಆಗಮಿಸುವ ಪ್ರತಿ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗೆ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸ್ ಮಾಡಲಾಗುತ್ತದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವಂತೆ ಸೂಚಿಸಲಾಗಿದೆ.
ಕೆಮ್ಮು, ಶೀತ, ಜ್ವರ ಲಕ್ಷಣಗಳಿದ್ದರೆ ಪ್ರತ್ಯೇಕ ಕೊಠಡಿ:
ಪರೀಕ್ಷಾರ್ಥಿಗಳಲ್ಲಿ ಜ್ವರ ಕೆಮ್ಮು, ಶೀತ, ಲಕ್ಷಣಗಳು ಕಾಣಿಸಿಕೊಂಡಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಎರಡು ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಇಬ್ಬರು ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜಿಸಲಾಗಿದೆ. ಪರೀಕ್ಷೆಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತೆಯಾಗಿ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಪ್ರಕಾರ ನಿಷೇಧಾಜ್ಞೆ ಆದೇಶವನ್ನ ಜಿಲ್ಲಾಧಿಕಾರಿ ಬಿ. ಶರತ್ ಹೊರಡಿಸಿದ್ದಾರೆ.