ಕಲಬುರಗಿ:ಆಸ್ಪತ್ರೆಯ ಮುಂಭಾಗದಲ್ಲಿಯೇ ಗರ್ಭಿಣಿಗೆ ಹೆರಿಗೆಯಾದ ಘಟನೆ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಕೊರೊನಾ ಭೀತಿಯಿಂದ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ವಿಳಂಬ... ಜಿಮ್ಸ್ ಆವರಣದಲ್ಲೇ ಗರ್ಭಿಣಿಗೆ ಹೆರಿಗೆ! - ಆಸ್ಪತ್ರೆ ಎದುರೆ ಗರ್ಭಿಣಿಗೆ ಹೆರಿಗೆ
ಕಲಬುರಗಿ ಜಿಲ್ಲಾಸ್ಪತ್ರೆ ಎದುರೇ ಗರ್ಭಿಣಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಕೊರೊನಾ ಭೀತಿಯಿಂದಾಗಿ ಗರ್ಭಿಣಿಯನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರಿಂದ ಆಸ್ಪತ್ರೆ ಆವರಣದಲ್ಲೇ ಹೆರಿಯಾಗಿದೆ.
ಕೊರೊನಾ ಭೀತಿಯಿಂದಾಗಿ ಆಸ್ಪತ್ರೆಯೊಳಗೆ ಮಹಿಳೆಯನ್ನು ದಾಖಲಿಸಿಕೊಳ್ಳಲು ಸಿಬ್ಬಂದಿ ಹಿಂದು ಮುಂದು ನೋಡಿದ್ದಾರೆ. ಹೀಗಾಗಿ ಆಸ್ಪತ್ರೆಯ ಮುಂಭಾಗದಲ್ಲಿಯೇ ಹೆರಿಗೆಯಾಗಿದೆ. ಜೇವರ್ಗಿ ತಾಲೂಕಿನ ಚೆನ್ನಮ್ಮ ಮಗುವಿಗೆ ಜನ್ಮ ನೀಡಿದವರು. ಘಟನೆ ತಿಳಿದು ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿದ್ದಾರೆ.
ಇಂದು ಬೆಳಗ್ಗೆ ಜಿಮ್ಸ್ ಆಸ್ಪತ್ರೆಗೆ ಬಂದಿದ್ದ ಗರ್ಭಿಣಿಗೆ ಸಕಾಲಕ್ಕೆ ಅಲ್ಲಿನ ಸಿಬ್ಬಂದಿ ಸ್ಪಂದಿಸಿರಲಿಲ್ಲ. ಹೆರಿಗೆಯಾದ ಮೇಲೆ ಆಸ್ಪತ್ರೆಯೊಳಗೆ ಕರೆದೊಯ್ದು, ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.