ಕಲಬುರಗಿ :ಸಿದ್ದರಾಮಯ್ಯ ಅವರಿಗೆ ತಾಕತ್ತು, ಧಮ್ ಇದ್ರೆ, ಕ್ರಿಶ್ಚಿಯನ್ ಪಾದ್ರಿಗಳ ಲೋಹದ ಬಗ್ಗೆ ಮುಸ್ಲಿಂ ಮೌಲ್ವಿಗಳ ಬಗ್ಗೆ ಮಾತನಾಡಲಿ ಎಂದು ಹಾವೇರಿ ಶರಣ ಬಸವೇಶ್ವರ ಮಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಸವಾಲು ಹಾಕಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳ್ಯಾರು ಹಿಜಾಬ್ ವಿಚಾರದ ಬಗ್ಗೆ ಮಾತನಾಡಿಲ್ಲ. ಆದರೆ, ಸಿದ್ದರಾಮಯ್ಯ ಅವರು ಸ್ವಾಮೀಜಿಯ ಅಸ್ಮಿತೆಯನ್ನ ಪ್ರಶ್ನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಸ್ವಾಮೀಜಿ ವಾಗ್ದಾಳಿ ನಡೆಸಿರುವುದು.. ಸಿದ್ದರಾಮಯ್ಯ ರಾಜಕೀಯದಲ್ಲಿ ಇರಲು ಲಾಯಕ್ ಇಲ್ಲ. ಸಿದ್ದರಾಮಯ್ಯ ಅವರ ಅಹಂಕಾರದ ನಡೆ ಯಾರೂ ಸಹ ಒಪ್ಪಲು ಸಾಧ್ಯವಿಲ್ಲ. ರಾಜಕೀಯದ ಸಲುವಾಗಿ ಈ ರೀತಿ ಸ್ವಾಮೀಜಿಗಳ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರನ್ನು ನಿಮ್ಹಾನ್ಸ್‌ಗೆ ಸೇರಿಸಿ : ಸಿದ್ದರಾಮಯ್ಯ ಅವರನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಲು ಹಿಂದುಳಿದ ವರ್ಗಗಳ 20 ಮಂದಿ ಮಠಾಧಿಪತಿಗಳು ಮುಂದಾಗುತ್ತೇವೆ. ಸಿದ್ದರಾಮಯ್ಯ ಎಲ್ಲಿ ನಿಲ್ತಾರೆ?, ಆ ಕ್ಷೇತ್ರಕ್ಕೆ ಹೋಗಿ ಮಠಾಧಿಪತಿಗಳು ಅವರನ್ನ ಸೋಲಿಸುವಂತಹ ಕೆಲಸ ಮಾಡುತ್ತೇವೆ. ಸಿದ್ದರಾಮಯ್ಯ ಅವರಿಗೆ ಹುಚ್ಚು ಹಿಡಿದಿದೆ. ಅವರನ್ನ ನಿಮ್ಹಾನ್ಸ್‌ಗೆ ಸೇರಿಸಬೇಕು. ಸಿಎಲ್‌ಪಿ ಸ್ಥಾನದಿಂದ ಕೆಳಗಿಳಿಸಬೇಕು. ಇಲ್ಲದೇ ಹೋದಲ್ಲಿ ಮಾ.30ರಂದು ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಿದ್ದರಾಮಯ್ಯಗೆ ರಾಜಕೀಯ ಭವಿಷ್ಯ ಇಲ್ಲ: ಸಿದ್ದರಾಮಯ್ಯ ಮಾಂಸ ತಿಂದು ಧರ್ಮಸ್ಥಳ ಸೇರಿದಂತೆ ಅನೇಕ ದೇವಸ್ಥಾನಕ್ಕೆ ಹೋಗಿದ್ದಾರೆ. ಕೇಸರಿ ವಸ್ತ್ರದ ಮೇಲೆ ಆಣೆ ಮಾಡಿ ಹೇಳುತ್ತೇನೆ. ಅವರಿಗೆ ರಾಜಕೀಯದಲ್ಲಿ ಭವಿಷ್ಯ ಇಲ್ಲ. ಕ್ಷಮೆ ಯಾಚಿಸದಿದ್ದಲ್ಲಿ ಮಠಾಧೀಶರು ಬಹಿಷ್ಕಾರ ಹಾಕಬೇಕಾಗುತ್ತದೆ. ಸಿದ್ದರಾಮಯ್ಯ ಆನೆ ನಡೆದಿದ್ದೇ ದಾರಿ, ನನ್ನನ್ನ ಯಾರೂ ಪ್ರಶ್ನೆ ಮಾಡೋರು ಇಲ್ಲ ಅಂತಾ ಓಡಾಡುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸದೆ ಬಿಡುದಿಲ್ಲ ಎಂದು ಕಿಡಿಕಾರಿದರು. ದೇವರ ಬಗ್ಗೆ ಮಾತಾಡಿ ಮಾತಾಡಿ ಸಿದ್ದರಾಮಯ್ಯ ಅವರ ವ್ಯೆಯಕ್ತಿಕ ಜೀವನ ಏನಾಗಿದೆ ಅಂತಾ ನೋಡಿಕೊಳ್ಳಲಿ. ಐದು ವರ್ಷಗಳ ಹಿಂದೆ ವ್ಯೆಯಕ್ತಿಕ ಜೀವನದಲ್ಲಿ ಏನಾಗಿದೆ ಅಂತಾ ಸಿದ್ದರಾಮಯ್ಯ ತಿಳಿದುಕೊಳ್ಳಲಿ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಪುತ್ರ ರಾಕೇಶ್ ವಿಚಾರ ಪ್ರಸ್ತಾಪಿಸಿದರು.
ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಲ್ಲ:ನಮ್ಮೆಲ್ಲ ಸ್ವಾಮೀಜಿಗಳ ಗುರಿ ಒಂದೇ, ಸಿದ್ದರಾಮಯ್ಯ ಅವರನ್ನು ಸೋಲಿಸುವುದು. ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗೋದಿಲ್ಲ. 'ಸಿದ್ದರಾಮಯ್ಯ ಹಠಾವೋ ಆಂದೋಲನ' ಆರಂಭಿಸುತ್ತೇವೆ. ಯಾವುದೇ ಕಾರ್ಯಕ್ರಮಕ್ಕೆ ಅವರನ್ನ ಆಹ್ವಾನ ಮಾಡುವುದಿಲ್ಲ ಎಂದು ಗುಡುಗಿದರು.
ಇದನ್ನೂ ಓದಿ:ನನ್ಗೆ ಸ್ವಾಮೀಜಿಗಳ ಮೇಲೆ ಗೌರವವಿದೆ, ನೀವ್ ಯಾವ್ದ್ ಯಾವ್ದಕ್ಕೋ ಲಿಂಕ್ ಮಾಡ್ಬೇಡಿ.. ಮಾಧ್ಯಮದವರ ಮೇಲೆ ಸಿದ್ದು ಗರಂ