ಕಲಬುರಗಿ: ಗಣೇಶ ಉತ್ಸವದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸೇರಿ ನಾಲ್ವರ ಭಾಷಣಕ್ಕೆ ನಿಷೇಧ ಹೇರಿದ ಕಲಬುರಗಿ ಜಿಲ್ಲಾಡಳಿತದ ನಡೆಗೆ ಮುತಾಲಿಕ್ ಕಿಡಿಕಾರಿದ್ದಾರೆ.
ಜೇವರ್ಗಿ ಪಟ್ಟಣದಲ್ಲಿಂದು ಗಣೇಶ ನಿಮಜ್ಜನ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಮುತಾಲಿಕ್ ಜನರನ್ನು ಉದ್ದೇಶಿಸಿ ಮಾತನಾಡುವವರಿದ್ದರು. ಆದರೆ, ಸೆ. 20 ಹಾಗೂ 21 ಎರಡು ದಿನಗಳ ಕಾಲ ಮುತಾಲಿಕ್ ಮತ್ತು ಚೈತ್ರಾ ಕುಂದಾಪುರ, ಕಾಳಿಸ್ವಾಮಿ, ಹಾರಿಕಾ ಸೇರಿ ನಾಲ್ವರ ಭಾಷಣಕ್ಕೆ ಕಲಬುರಗಿ ಜಿಲ್ಲಾಡಳಿತ ನಿಷೇಧ ಹೇರಿ ಆದೇಶ ಹೊರಡಿಸಿದೆ.
ರಾಜ್ಯಾದ್ಯಂತ ಗಣೇಶ ನಿಮಜ್ಜನ ವಿಜೃಂಭಣೆಯಿಂದ ನಡೆಯುತ್ತಿದೆ. ನಿಮಜ್ಜನ ಸಮಾರಂಭದಲ್ಲಿ ಲಕ್ಷಾಂತರ ಜನ ಸೇರಲು ಹಿಂದೂ ಸಮಾಜ ಜಾಗೃತರಾಗಿದ್ದಾರೆ. ಆದರೆ, ಕಲಬುರಗಿ ಜಿಲ್ಲಾಧಿಕಾರಿ ನನಗೆ ನಿರ್ಬಂಧ ಹೇರಿದ್ದಾರೆ. ಇದು ಯಾವ ಸ್ವಾತಂತ್ರ್ಯ? ಇದು ಡಾ ಅಂಬೇಡ್ಕರ್ ಸಂವಿಧಾನ ಏನು ಅಂತ ಖಾರವಾಗಿ ಪ್ರಶ್ನಿಸಿದ್ದಾರೆ.
ಡಿಸಿ ನಮ್ಮ ಸ್ವಾತಂತ್ರ್ಯ ಹರಣ ಮಾಡುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧ. ಇದರ ಹಿಂದೆ ಯಾವ ಶಕ್ತಿ, ಯಾವ ಸಂಘಟನೆ ಇದೆ ಎನ್ನುವುದು ಮುಖ್ಯವಲ್ಲ. ಒಬ್ಬ ವ್ಯಕ್ತಿಗೆ ಇಂತಹ ಕಾರ್ಯಕ್ರಮದಲ್ಲಿ ನಿರ್ಬಂಧ ಹೇರಿರೋದು ಸರಿಯಲ್ಲ. ಮುತಾಲಿಕ್ ಬರ್ತಾರೆ ಎಂದು ಸಾವಿರಾರು ಜನ ದಾರಿ ನೋಡುತ್ತಿದ್ದಾರೆ. ಮುತಾಲಿಕ್‌ರನ್ನು ಭೇಟಿ ಮಾಡಲು ಕಾದಿದ್ದ ಜನರಿಗೆ ಇಂದು ನಿರಾಶೆಯಾಗಿದೆ. ನಿರ್ಬಂಧ ಹೇರಿದ್ದವರಿಗೆ ನನ್ನ ಧಿಕ್ಕಾರ, ಕುತಂತ್ರದ ಹಿಂದಿರುವರಿಗೆ ಗಣೇಶ ಶಾಪ ಕೊಡಲಿ ಎಂದು ಶಪಿಸಿದ್ದಾರೆ.
ಇದನ್ನೂ ಓದಿ:ಗಣೇಶೋತ್ಸವ: ಪ್ರಮೋದ್ ಮುತಾಲಿಕ್ ಸೇರಿ ನಾಲ್ವರ ಭಾಷಣಕ್ಕೆ ಕಲಬುರಗಿ ಡಿಸಿ ನಿರ್ಬಂಧ