ಕಲಬುರಗಿ:ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯಲ್ಲಿ ಮೂರು ದಿನದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಸಮಾಪನಗೊಂಡಿತು. ಕಲ್ಯಾಣ ಕರ್ನಾಟಕದ 41 ವಿಧಾನಸಭೆ ಕ್ಷೇತ್ರಗಳಲ್ಲಿ ಕೈ ಪಡೆ ಕಮಾಲ್ ಮಾಡಲು ಪ್ರಜಾಧ್ವನಿ ಮೂಲಕ ಮತದಾರನ ಮನ ಗೆದ್ದು ಅಧಿಕಾರದ ಗದ್ದುಗೆ ಏರಲು ಅಬ್ಬರದ ಪ್ರಚಾರ ನಡೆಸುತ್ತಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ, ಶಾಸಕ ಪ್ರಿಯಾಂಕ್ ಖರ್ಗೆ ಅವರ ಕ್ಷೇತ್ರ ಚಿತ್ತಾಪುರದಲ್ಲಿ ನಡೆದ ಯಾತ್ರೆಗೆ ಜನರಿಂದ ಬೆಂಬಲ ಸಿಕ್ಕಿದೆ. ಕೈ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ರೋಡ್ ಶೋ ನಡೆಸಿ ಸಿದ್ದರಾಮಯ್ಯಗೆ ಸ್ವಾಗತ ಕೋರಿದರು.
ಬಳಿಕ ಬೃಹತ್ ಸಮಾವೇಶದಲ್ಲಿ ಮಾತಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು. ಬಿಜೆಪಿಯರಿಗೆ ಚಿತ್ತಾಪುರ ಕ್ಷೇತ್ರದಲ್ಲಿ ಕ್ಯಾಂಡಿಡೇಟ್ ಸಿಗ್ತಿಲ್ಲ. ಯಾರ್ ಬರ್ತಾರೋ ಬರಲಿ, ನಾನು ಬ್ಯಾಟ್ ಹಿಡಿದು ನಿಂತಿದ್ದೇನೆ ಎಂದರು. ಮಾಜಿ ಸಚಿವ ಜಮೀರ್ ಅಹ್ಮದ್ ಕೂಡ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿ ಚಿತ್ತಾಪುರದಲ್ಲಿ ಪ್ರಿಯಾಂಕ್ ಖರ್ಗೆ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರಂತಹ ಲೀಡರ್ ನಿಮಗೆ ಸಿಗೋದಿಲ್ಲ. ಮತ್ತೊಮ್ಮೆ ಆಶೀರ್ವಾದ ಮಾಡಿ ಎಂದು ಅಲ್ಪಸಂಖ್ಯಾತರಿಗೆ ಜಮೀರ್ ಮನವಿ ಮಾಡಿದರು.