ಕಲಬುರಗಿ: ನಗರದಲ್ಲಿ ಬೆಳ್ಳೆಂಬೆಳಗ್ಗೆ ಗುಂಡಿನ ಸದ್ದು ಕೇಳಿ ಬಂದಿದೆ. ಕುಖ್ಯಾತ ದರೋಡೆಕೋರನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಮೆಹಬೂಬ್ ನಗರದ ನಿವಾಸಿ ಮುಬೀನ್(25) ಮೇಲೆ ನಗರದ ಹೊರವಲಯದ ತಾಜಸುಲ್ತಾನಪುರ ಬಳಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಈ ಹಿಂದೆ ವ್ಯಕ್ತಿಯೋರ್ವನನ್ನು ಕೊಲೆ ಮಾಡಿ ದರೋಡೆ ಮಾಡಿದ್ದ ಆರೋಪಿ ಮುಬೀನ್ ಕಳೆದ ರಾತ್ರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.
ಇಂದು ಮುಂಜಾನೆ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲು ಕರೆದೊಯ್ದಿದ್ದಾಗ ತಪ್ಪಿಸಿಕೊಂಡು ಹೋಗಲು ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಈ ವೇಳೆ ಆತ್ಮರಕ್ಷಣೆಗಾಗಿ ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ಸೋಮಲಿಂಗ್ ಮುಬೀನ್ ಮೇಲೆ ಫೈರಿಂಗ್ ಮಾಡಿದ್ದಾರೆ.
ಮುಬೀನ್ ಕಾಲಿಗೆ ಗುಂಡು ತಗುಲಿದೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಾಳು ಮುಬೀನ್ನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.