ಸ್ಪಷ್ಟನೆ ನೀಡುತ್ತಿರುವ ಕಾನ್ಸ್‌ಟೇಬಲ್ ಚಂದ್ರಕಾಂತ ಕಲಬುರಗಿ:ಕೆಲಸದ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ನಗರ ಸಂಚಾರ ಪೊಲೀಸ್ ಠಾಣೆ-1ರಲ್ಲಿನ ಕಾನ್ಸ್‌ಟೇಬಲ್ ಚಂದ್ರಕಾಂತ ವಿಷ ಸೇವಿಸಿದ್ದಾರೆ ಎಂದು ಗುರುವಾರ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಸುದ್ದಿ ಹರಿದಾಡಿದ ಬೆನ್ನಲ್ಲೇ ಕಾನ್ಸ್‌ಟೇಬಲ್ ಚಂದ್ರಕಾಂತ ಅವರೇ ಜಿಮ್ಸ್ ಆಸ್ಪತ್ರೆಯಿಂದ ಸ್ಪಷ್ಟನೆ ನೀಡಿದ್ದಾರೆ.
"ಹಿರಿಯ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ವಿಷ ಸೇವಿಸಿ ಆಸ್ಪತ್ರೆ ಸೇರಿದ್ದೇನೆ ಎಂದು ಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ಸುಳ್ಳು. ನನಗೆ ಯಾವುದೇ ಅಧಿಕಾರಿಗಳಿಂದ ಕಿರುಕುಳ ಇಲ್ಲ. ಅನಾರೋಗ್ಯದ ಕಾರಣ ಆಸ್ಪತ್ರೆ ಸೇರಿದ್ದೇನೆ" ಎಂದು ಚಂದ್ರಕಾಂತ ತಿಳಿಸಿದ್ದಾರೆ.
ಮೇಲಾಧಿಕಾರಿಗಳು ಕೆಲಸದಲ್ಲಿ ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಆದರೆ ಅಂತಹದ್ದು ಏನೂ ನಡೆದಿಲ್ಲ. ನಾನು ವಿಷ ಕೂಡಾ ತೆಗೆದುಕೊಂಡಿಲ್ಲ. ಅನಾರೋಗ್ಯದ ನಿಮಿತ್ತ ಆಸ್ಪತ್ರೆ ದಾಖಲಾಗಿದ್ದೇನೆ. ನನಗೆ ವರ್ಗಾವಣೆ ಆಗಿದ್ದು ನಿಜ, ಆದರೆ ಸಂಚಾರಿ ಠಾಣೆಗೆ ಬಂದು ಒಂದು ವರ್ಷ ಮಾತ್ರ ಆಗಿದೆ. ಹೀಗಾಗಿ ಇನ್ನೂ ಒಂದು ವರ್ಷ ವರ್ಗಾವಣೆ ಮಾಡದಂತೆ ಪೊಲೀಸ್ ಕಮಿಷನರ್ ಮುಂದೆ ಮನವಿ ಮಾಡಿದ್ದೇನೆ. ಅದಕ್ಕೆ ಅವರು ಕೂಡಾ ಒಪ್ಪಿಗೆ ಕೊಟ್ಟಿದ್ದಾರೆ. ಮೇಲಾಧಿಕಾರಿಗಳು ಇಷ್ಟೊಂದು ಬೆಂಬಲವಾಗಿ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತಿದ್ದಾರೆ. ವಿಷ ತೆಗೆದುಕೊಳ್ಳುವ ಅಗತ್ಯವೇ ಇಲ್ಲ. ಮೇಲಾಧಿಕಾರಿಗಳು ಇಷ್ಟು ಉತ್ತಮವಾಗಿ ಪ್ರೋತ್ಸಾಹ ನೀಡುತ್ತಿರುವಾಗ ನಮಗೆ ಕಾರ್ಯ ನಿರ್ವಹಿಸಲು ಹೆಮ್ಮೆ ಆಗುತ್ತಿದೆ ಎಂದು ಹೇಳಿದರು.
ಈ ಮಧ್ಯೆ, ನಿನ್ನೆ ಪೊಲೀಸ್ ಕಾನ್ಸ್‌ಟೇಬಲ್‌ವೊಬ್ಬರು, ಹಿರಿಯ ಅಧಿಕಾರಿಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಹಪ್ತಾ ವಸೂಲಿಯಂಥ ಕೆಲಸಗಳಿಗೆ ನಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ. ಮಾಡದೇ ಹೋದಲ್ಲಿ ಕಿರುಕುಳ ನೀಡುತ್ತಿದ್ದಾರೆ, ಹಪ್ತಾ ವಸೂಲಿಗೆ ಸಹಕರಿಸದ ಕಾನ್ಸ್‌ಟೇಬಲ್‌ಗಳನ್ನು ವರ್ಗಾವಣೆ ಮಾಡುತ್ತಿದ್ದಾರೆಂದು ಕಿಡಿಕಾರಿದ್ದಾರೆ.
KSRTC ಚಾಲಕನಿಂದ ಆತ್ಮಹತ್ಯೆ ಯತ್ನ:ಮಂಡ್ಯದಲ್ಲಿ ವರ್ಗಾವಣೆಗೆ ಮನನೊಂದು ಚಾಲಕ ಕಂ ನಿರ್ವಾಹಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಾಗಮಂಗಲದ ಕೆಎಸ್ಆರ್ಟಿಸಿ ಬಸ್ ಡಿಪೋದಲ್ಲಿ ನಿನ್ನೆ ನಡೆದಿದೆ. ನಾಗಮಂಗಲದ ಕೆಎಸ್ಆರ್ಟಿ ಬಸ್ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೆಚ್.ಆರ್ ಜಗದೀಶ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಈ ಸಂಬಂಧ ಗುರುವಾರ ಜಗದೀಶ್ ಅವರಿಗೆ ವರ್ಗಾವಣೆ ಆದೇಶ ನೀಡಲು ಅಧಿಕಾರಿಗಳು ಮುಂದಾಗಿದ್ದರು.
ಆದರೆ, ವರ್ಗಾವಣೆ ಆದೇಶ ತೆಗೆದುಕೊಳ್ಳದೇ ಜಗದೀಶ್ ನಾಗಮಂಗಲ ಬಸ್ ಡಿಪೋ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಜಗದೀಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಇಲ್ಲಿನ ಸಿಬ್ಬಂದಿ ಯತ್ನಿಸಿದರೂ ವರ್ಗಾವಣೆ ಆದೇಶ ರದ್ದುಗೊಳಿಸುವವರೆಗೂ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದರು. ಕೊನೆಗೆ ಜಗದೀಶ್ ಮನವೊಲಿಸಿ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:ಚಾಲಕ ಆತ್ಮಹತ್ಯೆ ಯತ್ನ ಪ್ರಕರಣ: ಹಿರಿಯ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆ: ಜಿ.ಪರಮೇಶ್ವರ್