ಕರ್ನಾಟಕ

karnataka

ETV Bharat / state

ಕಲಬುರಗಿ: ಎರಡು ವರ್ಷಗಳಿಂದ ಹಗಲು ಹೊತ್ತಲ್ಲೇ ಮನೆಗಳ ಬೀಗ ಮುರಿದು ಕಳ್ಳತನ; ಖದೀಮ ಕೊನೆಗೂ ಸೆರೆ - etv bharat karnataka

ಎರಡು ವರ್ಷಗಳಿಂದ ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಕೊನೆಗೂ ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.

police-arrested-a-thief-who-has-been-stealing-houses-from-two-years-in-kalburagi
ಕಲಬುರಗಿ: ಹಾಡ ಹಗಲಲ್ಲೇ ಮನೆಗಳಿಗೆ ಕನ್ನ ಹಾಕುತ್ತಿದ್ದ ಖದೀಮನ ಬಂಧನ

By ETV Bharat Karnataka Team

Published : Oct 29, 2023, 9:19 AM IST

Updated : Oct 29, 2023, 9:41 AM IST

ನಗರ ಪೊಲೀಸ್ ಆಯುಕ್ತ ಚೇತನ್​ ಆರ್

ಕಲಬುರಗಿ:ಎರಡು ವರ್ಷಗಳಿಂದಹಗಲು ಹೊತ್ತಿನಲ್ಲೇ ಮನೆಗಳ ಬೀಗ ಒಡೆದು ಕಳ್ಳತನ ಮಾಡುತ್ತಿದ್ದ ಮನೆಗಳ್ಳನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಶಹಾಬಾದ ತಾಲೂಕಿನ ಮುತ್ತಗಾ ಗ್ರಾಮದ ವೀರಭದ್ರ ಪಂಚಾಳ ಬಂಧಿತ ಆರೋಪಿ. ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ 5 ಮನೆ ಕಳ್ಳತನ ಪ್ರಕರಣ ಮತ್ತು ಸಬ್‌ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ 1 ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನು ಬಂಧಿಸಲಾಗಿದೆ.

ಮನೆ ಕಳ್ಳತನ ಪ್ರಕರಣಗಳ ತನಿಖೆಯಲ್ಲಿ ದೊರೆತ ಬೆರಳಚ್ಚು ಮುದ್ರೆಯ ಆಧಾರದ ಮೇಲೆ ಆರೋಪಿಯ ಪತ್ತೆಗಾಗಿ ಫರಹತಾಬಾದ ಪಿಐ ಮಲ್ಲಿಕಾರ್ಜುನ ಇಕ್ಕಳಕಿ, ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಪಿಐ ಸುಶೀಲ್​ ಕುಮಾರ್​, ಸಬ್‌ಅರ್ಬನ್ ಪೊಲೀಸ್ ಠಾಣೆ ಪಿಐ ಸಂತೋಷ ತಟ್ಟಪಳ್ಳಿ ಹಾಗೂ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.

"ಪ್ರಕರಣಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದ ಪೊಲೀಸರು ನಗರದ ಶಹಾಬಾದ್ ರಿಂಗ್ ರಸ್ತೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಆರೋಪಿ ವೀರಭದ್ರ ಪಂಚಾಳನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈತ ನಗರದ ಅನ್ನಪೂರ್ಣೇಶ್ವರಿ ಕಾಲೋನಿ, ರಾಮ ಮಂದಿರ, ರಾಣೆಸ್ಪೀರ್ ದರ್ಗಾ ಏರಿಯಾ, ಸರಸ್ವತಿಪುರಂ, ಕೃಷ್ಣಾ ನಗರ, ಕೋಟನೂರ (ಡಿ) ಹಾಗೂ ಶಹಾಬಾದ ರಸ್ತೆಯಲ್ಲಿ ಕಳೆದ ಎರಡು ವರ್ಷಗಳಿಂದ ಹಗಲು ಹೊತ್ತಿನಲ್ಲಿ ಬೀಗ ಹಾಕಿದ ಮನೆಗಳ ಬೀಗ ಮುರಿದು ಮನೆ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. 80 ಗ್ರಾಂ ಚಿನ್ನಾಭರಣ , 250 ಗ್ರಾಂ ಬೆಳ್ಳಿ ಮತ್ತು 19,500 ರೂ.ನಗದು ಸೇರಿ 5.17 ಲಕ್ಷ ಮೊತ್ತದ ನಗ-ನಾಣ್ಯ ವಶಪಡಿಸಿಕೊಳ್ಳಲಾಗಿದೆ" ಎಂದು ನಗರ ಪೊಲೀಸ್ ಆಯುಕ್ತ ಚೇತನ್ ಆರ್. ತಿಳಿಸಿದರು. ಇದೇ ವೇಳೆ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಅವರು ಶ್ಲಾಘಿಸಿದ್ದಾರೆ.

ಕಾರ್ ಪಲ್ಟಿ, ಓರ್ವ ಸಾವು:ಕಲಬುರಗಿ-ಜೇವರ್ಗಿ ಹೆದ್ದಾರಿಯ ನದಿ ಸಿನ್ನೂರ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಗೆ ಪಲ್ಟಿಯಾಗಿ ಓರ್ವ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಶರಣಬಸಪ್ಪ (48) ಮೃತರು. ಕಾರ್ ಮಾಲೀಕ ದಿನೇಶ ವರ್ಮಾ ಸೇರಿ‌ ಇಬ್ಬರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನಿಂದ ಕಲಬುರಗಿಗೆ ಬರುವಾಗ ದುರ್ಘಟನೆ ನಡೆದಿದೆ. ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕಲಬುರಗಿ ಬ್ಯೂಟಿಷಿಯನ್ ಕೊಲೆ ಪ್ರಕರಣಕ್ಕೆ ಹೊಸ ತಿರುವು: ಪೊಲೀಸರು ಹೇಳಿದ್ದು ಹೀಗೆ

Last Updated : Oct 29, 2023, 9:41 AM IST

ABOUT THE AUTHOR

...view details