ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ್‌ನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಹೊಸ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಗೆ ಚಾಲನೆ ನೀಡಿದರು. ಹೊಸದಾಗಿ ಘೋಷಿಸಲಾದ ಕಂದಾಯ ಗ್ರಾಮಗಳ ತಾಂಡಾ ನಿವಾಸಿಗಳು ಮತ್ತು ಅರ್ಹ ಫಲಾನುಭವಿಗಳಿಗೆ ಏಕಕಾಲಕ್ಕೆ 50 ಸಾವಿರ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಇದಾಗಿದೆ. ಸಾಂಕೇತಿಕವಾಗಿ ಹಕ್ಕು ಪತ್ರ ವಿತರಿಸಿದ ಬಳಿಕ ಪ್ರಧಾನಿ ಮೋದಿ ಮಾತನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಧಾನಿ ಮೋದಿ ಅವರಿಗೆ ಬಂಜಾರಾ ಸಮುದಾಯದ ಸಾಂಪ್ರದಾಯಿಕ ಶಾಲು ಹಾಕಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸನ್ಮಾನಿಸಿದರು. ಅಲ್ಲದೇ, ಬಂಜಾರಾ ಸಮುದಾಯ ಮಹಿಳೆ ಕಸುತಿ ಮಾಡುತ್ತಿರುವ ಪ್ರತಿಮೆಯ ಸ್ಮರಣಿಕೆ ಹಾಗೂ ಜಗತ್ತಿನ ಮೊದಲ ಸಂಸತ್ತು ಅನುಭವ ಮಂಟಪದ ಸ್ಮರಣಿಕೆಯನ್ನು ಪ್ರಧಾನಿ ಮೋದಿ ಅವರಿಗೆ ಪ್ರದಾನ ಮಾಡಲಾಯಿತು. ನಂತರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಗೆ ಪ್ರಧಾನಿ ಚಾಲನೆ ನೀಡಿದರು. ಇದೇ ವೇಳೆ ನಗಾರಿ ಬಾಸಿರುವ ಮೂಲಕ ಮೋದಿ ಗಮನ ಸೆಳೆದರು.
ಲಂಬಾಣಿ ಭಾಷೆಯಲ್ಲಿಯೇ ತಮ್ಮ ಭಾಷಣ ಪ್ರಾರಂಭಿಸಿದ ನರೇಂದ್ರ ಮೋದಿಯವರ ಮಾತಿಗೆ ಲಂಬಾಣಿ ಸಮುದಾಯ ಚಪ್ಪಾಳೆ ತಟ್ಟಿ ಸಂಭ್ರಮಿಸಿದಲ್ಲದೆ ಮೋದಿ ಮೋದಿ ಎಂದು ಘೋಷಣೆ ಕೂಗಿತು. ಪ್ರಧಾನಿ ಬಳಿಕ ಕನ್ನಡದಲ್ಲಿ ಮಾತನಾಡುತ್ತಿದ್ದಂತೆ ಜನರ ಚಪ್ಪಾಳೆ, ಹರ್ಷೋದ್ಘಾರ ಮುಗಿಲು ಮುಟ್ಟಿತು. ಬಳಿಕ ಮಾತನಾಡಿದ ಪ್ರಧಾನಿ ಮೋದಿ, ದೇಶದಲ್ಲಿ ಸುದೀರ್ಘವಾಗಿ ಆಡಳಿತ ನಡೆಸಿದವರು ದಲಿತರು, ಆದಿವಾಸಿಗಳು ಮತ್ತು ವಂಚಿತರ ಏಳ್ಗೆ ಬಗ್ಗೆ ಗಮನ ಹರಿಸಲಿಲ್ಲ. ಸಮಾಜದ ವಂಚಿತ ವರ್ಗಗಳ ಹೆಸರಲ್ಲಿ ಕೇವಲ ಘೋಷವಾಕ್ಯಗಳ ಮೂಲಕ ಅವರ ಮತಗಳನ್ನು ಮಾತ್ರ ಪಡೆದರು. ಆದರೆ, ಈ ಸಮಾಜದ ಜನರ ಅಭಿವೃದ್ಧಿಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ನಗಾರಿ ಬಾರಿಸಿ ಹಕ್ಕುಪತ್ರ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ: ವಿಡಿಯೋ
ತಳ ಸಮುದಾಯಗಳ ಅಭಿವೃದ್ಧಿಗೆ ಕ್ರಮ:ಆದರೆ, ನಾವು ವಂಚಿತ ವರ್ಗಗಳ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಮೊದಲ ಬಾರಿಗೆ ದಲಿತರು, ವಂಚಿತರಿಗೆ ಸರಿಯಾದ ಅವಕಾಶ, ಗೌರವ ಸಿಗುತ್ತಿದೆ. ಶೌಚಾಲಯ, ವಿದ್ಯುತ್ ಜೊತೆಗೆ ಮೂಲಸೌಕರ್ಯಗಳನ್ನು ವೇಗವಾಗಿ ಒದಗಿಸಲಾಗುತ್ತಿದೆ. ಪಡಿತರ ವಿತರಣೆಯಲ್ಲಿ ಪಾರದರ್ಶಕತೆ ತರಲಾಗಿದೆ. ಶೋಷಿತ ವರ್ಗಗಳ ಜನತೆ ತಮ್ಮ ಹಕ್ಕುಗಳನ್ನು ಅವರು ಪಡೆಯುತ್ತಿದ್ದಾರೆ ಪ್ರಧಾನಿ ಮೋದಿ ತಿಳಿಸಿದರು.
ರಾಷ್ಟ್ರದ ಪ್ರಗತಿಗೆ ಬಂಜಾರ ಹಾಗೂ ಅಲೆಮಾರಿ ಸಮುದಾಯ ಬಹುದೊಡ್ಡ ಕಾಣಿಕೆಯನ್ನು ನೀಡುತ್ತಾ ಬಂದಿದೆ. ಬಸವಾದಿ ಶರಣರು ಅನುಭವ ಮಂಟಪ ಮೂಲಕ ಬಹು ಹಿಂದೆಯೇ ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಮಾದರಿಯನ್ನು ಜಗತ್ತಿಗೆ ಪರಿಚಯಿಸಿದ್ದರು. ಇದೇ ಸಿದ್ಧಾಂತದೊಂದಿಗೆ ನಾವು ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಹಾಗೂ ಸಬ್ ಕಾ ಪ್ರಯಾಸ್ ತತ್ವವನ್ನು ಅನುಸರಿಸುತ್ತಿದ್ದೇವೆ. ಬಂಜಾರ ಸಮುದಾಯ ಬಹಳಷ್ಟು ವರ್ಷ ಖಾಯಂ ನೆಲೆ, ಸೂರು ಇಲ್ಲದೆ ಸಂಕಷ್ಟವನ್ನು ಎದುರಿಸಿದೆ, ತಮ್ಮ ಹಕ್ಕಿಗಾಗಿ ಬಹು ದೀರ್ಘಕಾಲ ಹೋರಾಡಿದೆ. ಈಗ ಅವರು ಕೂಡ ಗೌರವ, ಅಭಿಮಾನದಿಂದ ಬದುಕುವ ಕಾಲ ಬಂದಿದೆ. ಬರುವ ದಿನಗಳಲ್ಲಿ ಕಂದಾಯ ಗ್ರಾಮಗಳಾದ ಎಲ್ಲ ತಾಂಡಾ, ಹಾಡಿ, ಹಟ್ಟಿ ಮುಂತಾದ ಪ್ರದೇಶಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಪಕ್ಕಾ ಮನೆಗಳನ್ನು ನಿರ್ಮಿಸಿ ಗುಡಿಸಲು ಮುಕ್ತ ಗ್ರಾಮಗಳನ್ನಾಗಿ ಮಾಡಲಾಗುವುದು, ಅಷ್ಟೇ ಅಲ್ಲದೆ, ಇಲ್ಲಿನ ಮನೆಗಳಿಗೆ ಶೌಚಾಲಯ, ವಿದ್ಯುತ್ ಸಂಪರ್ಕ, ನಲ್ಲಿ ನೀರು, ಅಡುಗೆ ಅನಿಲ ಸಂಪರ್ಕ ಒದಗಿಸಲಾಗುವುದು. ಸಮುದಾಯದ ಯುವ ಪ್ರತಿಭೆಗಳಿಗೆ ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್, ಕೌಶಲ್ಯ ತರಬೇತಿ, ಉದ್ಯೋಗ ದೊರಕಿಸಲು ಶ್ರಮಿಸಲಾಗುವುದು. ಬಂಜಾರ ಸಮುದಾಯದವರು ಇನ್ನು ನಿಶ್ಚಿಂತೆಯಿಂದ ತಮ್ಮ ಬದುಕು ಕಟ್ಟಿಕೊಳ್ಳಬೇಕು ಎಂದರು.