ಕಲಬುರಗಿ: ಜ.26ರಂದು ನಡೆದ ಫೋಟೋಗ್ರಾಫರ್ ಶಿವಕುಮಾರ ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಅನೈತಿಕ ಸಂಬಂಧ ಶಂಕೆಯಿಂದ ಕೊಲೆ ನಡೆದಿದೆ ಎಂಬುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಕಳೆದ ವಾರ ಕಲಬುರಗಿ ಹೊರವಲಯದ ಸಾವಳಗಿ ರೈಲು ಹಳಿಯ ಮೇಲೆ ಯುವಕನ ಶವ ಪತ್ತೆಯಾಗಿತ್ತು. ದುಷ್ಕರ್ಮಿಗಳು ಹಳಿ ಪಕ್ಕದ ರಸ್ತೆ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ, ಬಳಿಕ ರೈಲು ಹಳಿಯ ಮೇಲೆ ಶವ ಬಿಸಾಡಿ ಪರಾರಿಯಾಗಿದ್ದರು. ಮೃತ ದೇಹದ ಮೇಲೆ ರೈಲು ಹರಿದ ಪರಿಣಾಮ ದೇಹ ಛಿದ್ರವಾಗಿತ್ತು.
ಶಿವಕುಮಾರ (ಕೊಲೆಯಾದ ಫೋಟೋಗ್ರಾಫರ್ ) ಹೀಗಾಗಿ ಸಾವನ್ನಪ್ಪಿದ ವ್ಯಕ್ತಿ ಯಾರು ಅನ್ನೋದು ಪತ್ತೆ ಮಾಡುವುದು ರೈಲ್ವೆ ಪೊಲೀಸರಿಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಅಂತಿಮವಾಗಿ ಶವದ ಕೈ ಮೇಲಿದ್ದ ತ್ರಿಶುಲಾಕಾರದ ಹಚ್ಚೆಯಿಂದ ಆತ ಯಾರು? ಎಂಬುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಕೊಲೆಯಾದ ಯುವಕನನ್ನು ಶಿವಕುಮಾರ ಆಳಂದಕರ (28) ಎಂದು ಗುರುತಿಸಲಾಗಿದೆ. ಅಲ್ಲದೇ ಪ್ರಕರಣ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಕಮಲಾಪುರ ತಾಲೂಕು ಶ್ರೀಚಂದ ಗ್ರಾಮದ ನಿವಾಸಿ ಮಹಾಂತೇಶ ಆಳಂದಕರ್ (21), ಶರಣಸಿರಸಗಿಯ ಬಸವರಾಜ ಸಲಗಾರ (24), ಫಕಿರಪ್ಪ ಸಲಗಾರ (25), ಸಿದ್ಧಾರೂಢ ಕೋರಬಾರ (26) ಹಾಗೂ ಅಶೋಕ ಜಮಾದಾರ (26) ಬಂಧಿತ ಆರೋಪಿಗಳು.
ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಕೊಲೆ:ಕೊಲೆಯಾದ ಶಿವಕುಮಾರ ಕಮಲಾಪುರ ತಾಲೂಕಿನ ಶ್ರೀಚಂದ ಗ್ರಾಮದ ನಿವಾಸಿ(ಕೊಲೆಯ ಪ್ರಮುಖ ಆರೋಪಿ) ಮಹಾಂತೇಶನ ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನಂತೆ.
28 ವರ್ಷದ ಯುವಕ ತನ್ನ ತಾಯಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡ ಬಗ್ಗೆ ತಿಳಿದ ಮಹಾಂತೇಶ ಆಕ್ರೋಶಗೊಂಡು ಶಿವಕುಮಾರನನ್ನು ಮುಗಿಸಲು ನಿರ್ಧರಿಸಿದ್ದನಂತೆ. ಅದರಂತೆ ತನ್ನ ಸೋದರ ಮಾವ ಹಾಗೂ ಇನ್ನಿತರ ಮೂರು ಪರಿಚಯಸ್ತ ಯುವಕರ ಸಹಾಯದಿಂದ ಶಿವಕುಮಾರನ ಕುತ್ತಿಗೆಗೆ ಹರಿತವಾದ ಆಯುಧದಿಂದ ಚುಚ್ಚಿ ನಂತರ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಶವವನ್ನು ರೈಲು ಹಳಿಯ ಮೇಲೆ ಇಟ್ಟು ಪರಾರಿಯಾಗಿದ್ದರು ಎಂಬ ಮಾಹಿತಿ ಪೋಲಿಸರ ತನಿಖೆಯಿಂದ ತಿಳಿದು ಬಂದಿದೆ.
ಕಳೆದ 3 ತಿಂಗಳಿಂದ ಕೊಲೆಗೆ ಹೊಂಚು ಹಾಕಿ, ಕೊನೆಗೆ ಜ.26 ರಂದು ಶ್ರೀಚಂದ ಗ್ರಾಮದಿಂದ ಶಿವಕುಮಾರನನ್ನು ಕರೆತಂದು ಸಾವಳಗಿ ಬಳಿ ಕೊಲೆ ಮಾಡಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ವಾಡಿ ರೇಲ್ವೆ ಪೊಲೀಸ್ ಠಾಣೆಯಲ್ಲಿ ಕಲಂ 302. 201 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ:ಮಟ್ಕಾ ಬುಕ್ಕಿಯಿಂದ ಲಂಚ ಪಡೆದ ಪ್ರಕರಣ; ಬೆಳಗಾವಿಯ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು!