ಕಲಬುರಗಿ:ತಂದೆಯೊಬ್ಬ ತನ್ನ ಮಗ ಹಾಗೂ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಮನಕಲುಕುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಂಚಾವರಂ ಗ್ರಾಮದ ಬಳಿ ಪೋಚಾವರಂದಲ್ಲಿ ನಡೆದಿದೆ. ಚಿಂಚೋಳಿ ತಾಲೂಕು ಕುಂಚಾವರಂ ಗ್ರಾಮದ ಹಾಗೂ ಸದ್ಯ ತೆಲಂಗಾಣದಲ್ಲಿ ವಾಸವಾಗಿದ್ದ ಹಣಮಂತ ವಡ್ಡರ್ (40) ಹಾಗೂ ಆತನ ಪುತ್ರ ಓಂಕಾರ (9), ಪುತ್ರಿ ಅಕ್ಷರಾ (6) ಮೃತರು.
ಮೃತ ಹಣಮಂತ ಕೆಲ ವರ್ಷಗಳಿಂದ ತೆಲಂಗಾಣ ರಾಜ್ಯದ ತಾಂಡೂರಿನಲ್ಲಿ ವಾಸವಿದ್ದರು. ಇತ್ತೀಚೆಗೆ ಹಣಮಂತ ತನ್ನ ಮಕ್ಕಳೊಂದಿಗೆ ಕುಂಚಾವರಂ ಗ್ರಾಮಕ್ಕೆ ಬಂದಿದರು. ಶುಕ್ರವಾರ ತನ್ನ ಸಹೋದರ ಗ್ರಾಪಂ ಸದಸ್ಯ ಗೋಪಾಲ ಅವರಿಗೆ ಕರೆ ಮಾಡಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಶವಗಳ ಅಂತ್ಯಕ್ರಿಯೆ ಮಾಡಿ ಎಂದು ಹೇಳಿದ್ದರಂತೆ. ಇದರಿಂದ ಗಾಬರಿಗೊಂಡ ಗೋಪಾಲ ಹಾಗೂ ಕುಟುಂಬಸ್ಥರು ಹಣಮಂತ ಅವರನ್ನು ತಕ್ಷಣ ಹುಡುಕಾಡಿದ್ದಾರೆ. ಕುಂಚಾವರಂ ಪೊಲೀಸರು ಮತ್ತು ತೆಲಂಗಾಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಒಂದೆಡೆ ಕುಟುಂಬಸ್ಥರು, ಗ್ರಾಮಸ್ಥರು, ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಎಲ್ಲರೂ ಸೇರಿ ಹುಡುಕಿದರೂ ತಂದೆ ಮಕ್ಕಳು ಮಾತ್ರ ಪತ್ತೆಯಾಗಿರಲಿಲ್ಲ. ಆದರೆ ಭಾನುವಾರ ಕುಂಚಾವರಂ ಹತ್ತಿರದ ಪೋಚಾವರಂ ಗ್ರಾಮದ ತೋಟದ ಬಾವಿಯಲ್ಲಿ ಮೂವರ ಶವಗಳು ಪತ್ತೆಯಾಗಿವೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಶವಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಶವ ಸಿಗುತ್ತಿದ್ದಂತೆ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮಸ್ಥರು ಕಣ್ಣಿರು ಹಾಕುವ ದೃಶ್ಯ ಕಂಡುಬಂತು. ಆತ್ಮಹತ್ಯೆಗೆ ಕಾರಣ ಏನು ಅನ್ನೋದು ಇಲ್ಲಿಯವರೆಗೆ ತಿಳಿದುಬಂದಿಲ್ಲ. ಸ್ಥಳಕ್ಕೆ ಚಿಂಚೋಳಿ ಡಿಎಸ್ಪಿ ಕೆ ಬಸವರಾಜ, ಚಿಂಚೋಳಿ ಸಿಪಿಐ ಅಂಬಾರಾಯ ಕಮಾಲಮನಿ, ಕುಂಚಾವರಂ ಪಿಎಸ್ಐ ಉದಂಡಪ್ಪ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಯುವತಿ ಮೇಲೆ ಅತ್ಯಾಚಾರ :ಕಲಬುರಗಿ ನಗರದಲ್ಲಿ ಪ್ರತ್ಯೇಕ ಪ್ರಕರಣವೊಂದರಲ್ಲಿ 32 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ವಿಡಿಯೋ ಸೆರೆಹಿಡಿದುಕೊಂಡು ಒಂದು ಲಕ್ಷ ರೂಪಾಯಿ ಹಣದ ಬೇಡಿಕೆ ಇಟ್ಟಿರುವ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಲ್ಲಿನ ದೇವಿನಗರ ನಿವಾಸಿ ಮಶಪ್ಪ (35), ಭೀಮಬಾಯಿ ಹಾಗೂ ಇನ್ನೊಬ್ಬ ಸೇರಿದಂತೆ ಈ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿ ಮಶಪ್ಪ ಕಳೆದ 8 ತಿಂಗಳಿನಿಂದ ಯುವತಿಗೆ ಪ್ರೀತಿ ಪ್ರೇಮ ಎಂದು ಪುಸಲಾಯಿಸಿದ್ದ. ಆದರೆ, ಈಗಾಗಲೇ ಮಶಪ್ಪನಿಗೆ ಮದುವೆ ಆಗಿರುವ ವಿಷಯ ತಿಳಿದ ಯುವತಿ ಆತನೊಂದಿಗೆ ಸಂಪರ್ಕ ಕಡಿದುಕೊಳ್ಳಲು ಯತ್ನಿಸಿದ್ದಾಳೆ. ಆಗ ಮತ್ತೆ ಆಕೆಯನ್ನು ಪುಸಲಾಯಿಸಿ ತಾನಿದ್ದ ದೇವಿನಗರ ಬಡಾವಣೆಗೆ ಕರೆಸಿಕೊಂಡಿದ್ದಾನೆ. ಬಳಿಕ ಮೂವರು ಸೇರಿ ಬಲವಂತವಾಗಿ ಬಾಯಿಗೆ ಬಟ್ಟೆ ಕಟ್ಟಿ ಅತ್ಯಾಚಾರ ಎಸಗಿದ್ದಾರೆ. ಇದರ ದೃಶ್ಯ ಸೆರೆ ಹಿಡಿದು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿ ಯುವತಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂಓದಿ:ಪ್ರತ್ಯೇಕ ರೇಪ್ ಕೇಸ್: ಲಂಡನ್ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗೆ 6 ವರ್ಷ ಜೈಲು, 50 ವರ್ಷದ ವ್ಯಕ್ತಿಗೆ 18 ವರ್ಷ ಸೆರೆವಾಸ