ಕಲಬುರಗಿ:ಪತಿ ದುಬೈನಲ್ಲಿದ್ದ ಹಿನ್ನೆಲೆಯಲ್ಲಿ ಮತ್ತೊಬ್ಬನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆ ಕೊಲೆಗೀಡಾಗಿದ್ದಾಳೆ. ಪ್ರಿಯಕರನೇ ಕುಡಿದ ಮತ್ತಿನಲ್ಲಿ ಮಹಿಳೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ನೂರಾನಿ ಮೊಹಲ್ಲ ಬಡಾವಣೆಯಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಕಲಬುರಗಿ ನಗರದ ನೂರಾನಿ ಮೊಹಲ್ಲ ಬಡಾವಣೆಯ ನಿವಾಸಿ ಶಹನಾ ಬೇಗಂ ಎಂಬಾಕೆಯೇ ಕೊಲೆಯಾದ ಮಹಿಳೆ. 2004ರಲ್ಲಿ ಶಹನಾ ಬೇಗಂ ಮದುವೆಯಾಗಿದ್ದು, ಬಳಿಕ ಪತಿ ಕೆಲಸಕ್ಕೆಂದು ದುಬೈಗೆ ಹೋಗಿದ್ದ. ಗಂಡ ಹೋದ ಬಳಿಕ ಮಹಿಳೆಯು ತನಗಿಂತ ಕಿರಿಯಯಾದ ಯುವಕ ವಸಿಂ ಅಕ್ರಮ ಎಂಬಾತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇಬ್ಬರೂ ಲಿವಿಂಗ್ ಟುಗೇದರ್ ಅಂತ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು.
ಅತ್ತ ದುಬೈನಿಂದ ಗಂಡ ಪತ್ನಿಗೆ ಹಣ ಕಳಿಸುತ್ತಿದ್ದ. ಜೊತೆಗೆ ಗಾರ್ಮೆಂಟ್ಸ್ವೊಂದರಲ್ಲಿ ದುಡಿಯುತ್ತಿದ್ದ ಮಹಿಳೆ ತನ್ನ ಹಣವನ್ನೆಲ್ಲ ಪ್ರಿಯಕರನಿಗೆ ಸುರಿಯುತ್ತಿದ್ದಳು. ಇಬ್ಬರ ವಿವಾಹೇತರ ಸಂಬಂಧ ಹಲವು ವರ್ಷಗಳಿಂದ ನಡೆಯುತ್ತಿತ್ತು. ದುಡ್ಡಿಗಾಗಿ ಮಹಿಳೆ ಜೊತೆಗಿನ ಸಂಬಂಧ ಬಳಸಿಕೊಂಡ ವಸಿಂ ದೈಹಿಕ ಸುಖದೊಂದಿಗೆ ಆಕೆಯಿಂದ ಹಣ ವಸೂಲಿ ಮಾಡುತ್ತಿದ್ದ. ಆದರೆ ಮಾರ್ಚ್ 2ರಂದು ಕಂಠಪೂರ್ತಿ ಕುಡಿದು ಬಂದಿದ್ದ ವಸಿಂ, ಶಹನಾ ಬಳಿ ಹಣ ಕೇಳಿದ್ದಾನೆ. ಕೊಡದಿದ್ದಾಗ ಚಾಕುವಿನಿಂದ ಇರಿದು ಬೇಗಂಳನ್ನು ಹತ್ಯೆ ಮಾಡಿದ್ದಾನೆ. ಕೊಲೆಗೈದು ಪರಾರಿಯಾದ ಆತನನ್ನು ರೋಜಾ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಗಂಡ ದುಬೈನಲ್ಲಿ ಇರುವುದನ್ನೇ ದುರುಪಯೋಗ ಮಾಡಿಕೊಂಡು ಮತ್ತೊಬ್ಬನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆ ದುರಂತ ಅಂತ್ಯ ಕಂಡಿದ್ದಾಳೆ.
ಇದನ್ನೂ ಓದಿ:ಮರ್ಮಾಂಗಕ್ಕೆ ಒದ್ದು ಗಂಡನನ್ನೇ ಮುಗಿಸಿದ ಹೆಂಡತಿ: ಪ್ರೀತಿಸಿ ಮದುವೆಯಾದ್ರೂ ಇಬ್ಬರಿಗೂ ಇತ್ತು ಅಕ್ರಮ ಸಂಬಂಧ!