ಕಲಬುರಗಿ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಕ್ಷೇತ್ರ ರಾಮತೀರ್ಥ ಕುಂಡ ನಿರ್ಲಕ್ಷ್ಯಕ್ಕೊಳಗಾಗಿದ್ದು ಅಳಿವಿನಂಚಿಗೆ ಬಂದು ತಲುಪಿದೆ. ಈ ಸಂಬಂಧ ರಾಮತೀರ್ಥ ಕುಂಡಕ್ಕೆ ಕಾಯಕಲ್ಪ ಕಲ್ಲಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾದ ಕಲಬುರಗಿಯಿಂದ ಸುಮಾರು 81 ಕಿ.ಮೀ ದೂರದಲ್ಲಿರುವ ಯಡ್ರಾಮಿ ಪಟ್ಟಣದ ರಾಮ ತೀರ್ಥ ಕುಂಡ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿದೆ. ಗ್ರಾಮದ ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ರಾಮ ತೀರ್ಥ ಕುಂಡ ಒಂದು ಐತಿಹಾಸಿಕ ತಾಣವು ಹೌದು.
ವನವಾಸದ ಸಂದರ್ಭ ಭೇಟಿ ನೀಡಿದ್ದ ಪ್ರಭು ಶ್ರೀರಾಮಚಂದ್ರ :ಶ್ರೀರಾಮ ವನವಾಸಕ್ಕೆ ತೆರಳುವ ವೇಳೆ ಇಲ್ಲಿಗೆ ಬಂದು ತೀರ್ಥ ಕುಂಡದಲ್ಲಿ ಸ್ನಾನ ಮಾಡಿ ವನವಾಸಕ್ಕೆ ತೆರಳಿದ್ದನು ಎಂದು ಹೇಳಲಾಗುತ್ತದೆ. ಹೀಗಾಗಿ ಈ ಸ್ಥಳಕ್ಕೆ ರಾಮತೀರ್ಥ ಎಂದು ಕರೆಯಲಾಗುತ್ತದೆ. ಯಡ್ರಾಮಿ ಪಟ್ಟಣದ ಇನ್ನೊಂದು ಸ್ಥಳದಲ್ಲಿ ರಾಮಲಿಂಗ ದೇವಸ್ಥಾನವಿದ್ದು, ಇಲ್ಲಿ ರಾಮನು ಲಿಂಗವನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಿದ್ದನು. ಇದರಿಂದಾಗಿಯೇ ಈ ದೇವಾಲಯಕ್ಕೆ ರಾಮಲಿಂಗ ದೇವಸ್ಥಾನ ಎಂಬ ಹೆಸರು ಬಂತೆಂದು ಹೇಳುತ್ತಿರುವುದು ಐತಿಹ್ಯ. ಎಂತಹ ಬಿಸಿಲು, ಬರಗಾಲ ಬಂದರೂ ರಾಮಕುಂಡದಲ್ಲಿರುವ ನೀರು ಬತ್ತುವುದಿಲ್ಲ. ರಾಮಕುಂಡ ಕ್ಷೇತ್ರದ ಕಂಬಗಳು ಪರ್ಷಿಯನ್ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದ್ದು, ನೋಡಲು ಅತ್ಯಾಕರ್ಷಕವಾಗಿದೆ.
ಅಳಿವಿನಂಚಿನಲ್ಲಿರುವ ರಾಮತೀರ್ಥ ಕುಂಡ :ಸದ್ಯ ಯಡ್ರಾಮಿ ರಾಮತೀರ್ಥ ಕುಂಡ ನಿರ್ಲಕ್ಷ್ಯಕ್ಕೊಳಗಾಗಿ ಪಾಳು ಕೊಂಪೆಯಾಗಿ ಬದಲಾಗಿದೆ. ಮುಳ್ಳು ಗಿಡಗಂಟಿಗಳು ಬೆಳೆದು, ಗೋಡೆಗಳು ಶಿಥಿಲಗೊಂಡು ಧರೆಗುರುಳುವ ಹಂತಕ್ಕೆ ಬಂದು ತಲುಪಿದೆ. ಸಂಬಂಧಪಟ್ಟ ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.