ಕಲಬುರಗಿ:ಜಿಲ್ಲೆಯ ಚಿತ್ತಾಪುರ ರೈಲು ನಿಲ್ದಾಣದ ಪಕ್ಕದಲ್ಲಿರುವ ಸ್ಟೇಷನ್ ತಾಂಡಾದಲ್ಲಿ ಸುಮಾರು 3 ಸಾವಿರ ಮನೆಗಳಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಜನರು ವಾಸವಾಗಿದ್ದಾರೆ. ಇವರು ಚಿತ್ತಾಪುರ ಪಟ್ಟಣಕ್ಕೆ ಹೋಗಬೇಕಂದರೆ ರೈಲ್ವೆ ಹಳಿಗಳನ್ನು ದಾಟಿಕೊಂಡೇ ಹೋಗಬೇಕಾದಂತಹ ದುಸ್ಥಿತಿ ಇದೆ.
ಶಾಲಾ-ಕಾಲೇಜುಗಳಿಗೆ, ತರಕಾರಿ ಮಾರುಕಟ್ಟೆಗೆ ಹೋಗಬೇಕಾದರೂ ಪ್ರಾಣ ಪಣಕ್ಕಿಟ್ಟು ರೈಲ್ವೆ ಹಳಿಗಳನ್ನು ದಾಟಿಕೊಂಡೇ ಹೋಗಬೇಕು. ಈ ಹಿಂದೆ ಇಂತಹ ಹಲವು ಘಟನೆಗಳು ನಡೆದು ಹಲವರು ಪ್ರಾಣ ಕಳೆದಕೊಂಡಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ನಿನ್ನೆ ನಡೆದ ಘಟನೆ. ಚಿತ್ತಾಪುರ ಪಟ್ಟಣಕ್ಕೆ ಹೋಗಿ ಮರಳಿ ಬರುತ್ತಿದ್ದ ತಾಂಡಾ ನಿವಾಸಿ ಮಾನಿಬಾಯಿ ಎಂಬ ಅಜ್ಜಿ, ಹಳಿ ದಾಟಿಕೊಂಡು ಬರುವಾಗ ದಿಢೀರ್ ಅಂತ ಬಂದ ರೈಲಿನಡಿಯಲ್ಲಿ ಸಿಲುಕಿದ್ದಾಳೆ. ಅದೃಷ್ಟವಶಾತ್ ಹಳಿಗಳ ಮಧ್ಯದಲ್ಲಿ ಮಲಗಿ ಪ್ರಾಣ ರಕ್ಷಿಸಿಕೊಂಡಿದ್ದಾಳೆ. ಈ ಭಯಾನಕ ದೃಶ್ಯ ನೋಡುಗರ ಎದೆ ಝಲ್ ಎನಿಸುವಂತಿದೆ. ಇಂತಹ ನರಕ ಸದೃಶ್ಯವನ್ನು ತಾಂಡಾ ನಿವಾಸಿಗಳು ದಿನಾ ಅನುಭವಿಸುತ್ತಿದ್ದಾರೆ.