ಕಲಬುರಗಿ :ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಬೆಲೆ ಏರಿಕೆಯಾಗುತ್ತಿದ್ದಂತೆ ಬಿಸಿಲೂರು ಕಲಬುರಗಿ ಜನತೆ ತಮ್ಮ ವಾಹನಗಳನ್ನ ಮನೆಯಲ್ಲಿಯೇ ಬಿಟ್ಟು, ಸಿಟಿ ಬಸ್ಗಳ ಮೊರೆ ಹೋಗಲು ಆರಂಭಿಸಿದ್ದಾರೆ.
ಬೇಸಿಗೆಯ ಬಿಸಿಲೇರಿದಂತೆ ಇಂಧನ ಬೆಲೆಯೂ ಕೂಡ ಗಣನೀಯವಾಗಿ ಏರುತ್ತಿದೆ. ಇದರಿಂದ ಕಂಪನಿಗಳು ನೀಡುವ ಪ್ರಯಾಣದ ವೆಚ್ಚ ಸರಿದೂಗಿಸಲು ನೌಕರರು ಪರದಾಡುತ್ತಿದ್ದಾರೆ. ನಿತ್ಯ ಬೈಕ್ ಓಡಿಸಿ ಕೆಲಸ ನಿರ್ವಹಿಸುತ್ತಿದ್ದ ಮೆಡಿಕಲ್ ರೆಪ್ರೆಸೆಂಟೇಟಿವ್, ಡೆಲಿವರಿ ಬಾಯ್ಸ್ಗೆ ದಿಕ್ಕು ತೋಚದಂತಾಗಿದೆ.
ಹೀಗಾಗಿ, ಕಂಪನಿಗಳ ಪ್ರತಿನಿಧಿಗಳು, ಖಾಸಗಿ ಕಚೇರಿ ನೌಕರರು ತಮ್ಮ ವಾಹನ ಮನೆಯಲ್ಲಿಯೇ ಬಿಟ್ಟು, ಸಿಟಿ ಬಸ್ಗಳ ಮೊರೆ ಹೋಗುತ್ತಿದ್ದಾರೆ. ಬಸ್ ಪ್ರಯಾಣ ದರಕ್ಕೆ ಹೋಲಿಸಿದರೆ, ಪೆಟ್ರೋಲ್ ಹಾಕಿ ಬೈಕ್ ಓಡಿಸುವುದು ಹತ್ತು ಪಟ್ಟು ದುಪ್ಪಟ್ಟು ಎಂದು ಬಸ್ ಸಂಚಾರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.
ಬಸ್ಸಿನಲ್ಲಿ ಓಡಾಡುವರ ಸಂಖ್ಯೆ ಹೆಚ್ಚಾದ ಹಿನ್ನೆಲೆ, ಸಿಟಿ ಬಸ್ಗಳ ದಟ್ಟಣೆ ಹೆಚ್ಚಾಗುತ್ತಿದೆ. ಎನ್‌ಈಕೆಎಸ್‌ಆರ್‌ಟಿಸಿ ಕಲಬುರಗಿ ಘಟಕ-4ರಲ್ಲಿ ಸಿಟಿ ಬಸ್ಗಳ ನಿರ್ವಹಣೆ ಮಾಡಲಾಗುತ್ತಿದೆ. ಕೋವಿಡ್ ಲಾಕ್‌ಡೌನ್ ನಂತರ ಹಂತ-ಹಂತವಾಗಿ ನಗರದ ಎಲ್ಲಾ ಪ್ರದೇಶಗಳಲ್ಲಿ ಸಿಟಿ ಬಸ್ ಓಡಿಸಲಾಗುತ್ತಿದೆ. ಈ ಘಟಕದಲ್ಲಿ ಒಟ್ಟು 109 ಸಿಟಿ ಬಸ್ಗಳಿದ್ದು, ಇವುಗಳಲ್ಲಿ 89 ನಿತ್ಯ ರಸ್ತೆಗೆ ಇಳಿಯುತ್ತಿವೆ.