ಕಲಬುರಗಿ: ಬಿಜೆಪಿ ದುರಾಡಳಿತದಿಂದ ಜನ ಬೆಸತ್ತಿದ್ದಾರೆ. ನಮಗೆ ಅಚ್ಚೆದಿನ್ ಬೇಡಾ ಹಳೆಯ ದಿನಗಳೇ ಸಾಕು ಎಂದು ಜನ ಹೇಳ್ತಿದ್ದಾರೆ. ಬಿಜೆಪಿ ಆಡಳಿತದಿಂದ ರೋಸಿಹೋದ ಜನರು, ಎಲ್ಲ ಜನಾಂಗದವರು ಒಟ್ಟಾಗಿ ಕಾಂಗ್ರೆಸ್ ಬೆಂಬಲಿಸುವ ಮೂಲಕ ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಆಡಳಿತಕ್ಕೆ ತರಲು ನಿರ್ಧರಿಸಿದ್ದಾರೆಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಹೇಳಿದ್ದಾರೆ.
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕಲಬುರಗಿ ಜಿಲ್ಲೆಯಿಂದಲೇ ಪ್ರಚಾರ ಆರಂಭಿಸಲು ನಿರ್ಧರಿಸಿದ ಪಾಟೀಲ್, ಇಂದು ಜಿಲ್ಲೆ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ, ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅಚ್ಚೆ ದಿನ್ ಎಂದು ಗ್ಯಾಸ್ ಬೆಲೆ, ಅಡುಗೆ ಎಣ್ಣೆ ಬೆಲೆ ಸೇರಿ ಪ್ರತಿಯೊಂದರ ಬೆಲೆ ಗಗಣಕ್ಕೇರಿಸಿ ಕುಳಿತಿದ್ದಾರೆ. ಚುನಾವಣೆ ಯಾವಾಗ ಬರುತ್ತೆ, ಯಾವಾಗ ಇವರನ್ನು ಆಡಳಿತದಿಂದ ಇಳಿಸಬೇಕು ಎಂದು ಜನ ಪರಿತಪಿಸಿಕೊಂಡು ಕುಳಿತಿದ್ದಾರೆ. ಹೀಗಾಗಿ ನೀರಿಕ್ಷೆಗೂ ಮೀರಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕರ ಮೇಲೆ ಅನಗತ್ಯವಾಗಿ ದಾಳಿಗಳನ್ನು ನಡೆಸುವ ಕೇಂದ್ರ ಸರ್ಕಾರಕ್ಕೆ ಕರ್ನಾಟಕದಲ್ಲಿರುವ ಭ್ರಷ್ಟ ಸಚಿವರ ಮೇಲೆ ಯಾಕೆ ಐಟಿ, ಸಿಬಿಐ ದಾಳಿ ಮಾಡುವುದಿಲ್ಲ. ಸಚಿವರಾಗಿ ಮಾಧುಸ್ವಾಮಿ ರಾಜ್ಯದಲ್ಲಿ ಸರ್ಕಾರ ಇಲ್ಲ ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ. ಇದು ಬಿಜೆಪಿ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಎರಡೂವರೆ ಲಕ್ಷ ಕೋಟಿ ಇದ್ದ ಸಾಲ ಐದು ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದರು.
ಲಾಭಕ್ಕಾಗಿ ಬಿಎಸ್ವೈಗೆ ಸ್ಥಾನ:ಅಭಿವೃದ್ಧಿ, ಸಾಧನೆ ಇಲ್ಲದೆ ಹಿಂದೂ ಮುಸ್ಲಿಮರನ್ನು ವಿಭಜನೆ ಮಾಡಿ ಲಾಭ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆದಿದೆ. ಅದಕ್ಕೆ ಜನ ಈ ಸರ್ಕಾರವನ್ನು ಕಿತ್ತೊಗೆಯೋಕೆ ತೀರ್ಮಾನಿಸಿದ್ದಾರೆ. ಚುನಾವಣೆಯಲ್ಲಿ 40 ರಿಂದ 50 ಸೀಟ್ಗೆ ಬಿಜೆಪಿ ಸೀಮಿತವಾಗಲಿದೆ. 2023ರಲ್ಲಿ ರಾಜ್ಯದಲ್ಲಿ 2024ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಪಾಟೀಲ್ ಭವಿಷ್ಯ ನುಡಿದರು.