ಕಲಬುರಗಿ :ತಾಲೂಕಿನ ಭೂಪಾಲ ತೆಗನೂರು ಗ್ರಾಮ ಪಂಚಾಯತ್ ಪಿಡಿಒ ಹಾಗೂ ಅಧ್ಯಕ್ಷ ಸೇರಿ ಅಕ್ರಮ ಎಸಗಿದ್ದಾರೆ ಎಂದು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಮುಖಂಡರು ಆರೋಪಿಸಿದ್ದಾರೆ.
ಪಿಡಿಒ, ಅಧ್ಯಕ್ಷರ ವಿರುದ್ಧ ಅಕ್ರಮ ಆರೋಪ.. ಕ್ರಮಕ್ಕೆ ಗ್ರಾಮ ಪಂಚಾಯತ್ ಸದಸ್ಯರ ಆಗ್ರಹ
ತಾಲೂಕಿನ ಭೂಪಾಲ ತೆಗನೂರು ಗ್ರಾಮ ಪಂಚಾಯತ್ ಪಿಡಿಒ, ಅಧ್ಯಕ್ಷರು ಸೇರಿ ಪಂಚಾಯತ್‌ನಲ್ಲಿ ಅಕ್ರಮ ವೆಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪಿಡಿಒ ಹಾಗೂ ಅಧ್ಯಕ್ಷರ ವಿರುದ್ಧ ಸೂಕ್ತ ಕ್ರಮಕ್ಕೆ ಸದಸ್ಯರು ಆಗ್ರಹಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಗ್ರಾಮದ ಸದಸ್ಯರು, ತೆಗನೂರು ಗ್ರಾಮ ಪಂಚಾಯತ್ ಪಿಡಿಒ ಮಂಜುಳಾ ಮತ್ತು ಅಧ್ಯಕ್ಷರಾದ ಮಲ್ಲಿಕಾರ್ಜುನ ಬರ್ಲಿ ಸೇರಿ ಪಂಚಾಯತ್‌ನಲ್ಲಿ ಲೂಟಿ ಮಾಡುತ್ತಿದ್ದಾರೆ. 14ನೇ ಹಣಕಾಸು ಯೋಜನೆಯಡಿ ಬಂದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೇ ಅಂಬೇಡ್ಕರ್, ಇಂದಿರಾ, ಬಸವ ಯೋಜನೆಗಳ ಮನೆ ನೀಡಿಕೆಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ದೂರಿದರು.
ನೀರು ಪೂರೈಕೆ ಇತ್ಯಾದಿಗಳ ನಕಲಿ ಬಿಲ್ಗಳನ್ನು ಸೃಷ್ಟಿಸಿ ಲಕ್ಷಾಂತರ ರೂ. ಅಕ್ರಮ ಎಸಗಿದ್ದಾರೆ. ಇದನ್ನು ಪ್ರಶ್ನಿಸಿದಾಗ ಪಂಚಾಯತ್ ಸದಸ್ಯರಿಗೆ ಪಿಡಿಒ ಬೆದರಿಕೆ ಹಾಕುತ್ತಿದ್ದಾರೆ. ಕೂಡಲೇ ದರ್ಪ ತೋರುತ್ತಿರುವ ಪಿಡಿಒ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಗ್ರಾಮ ಪಂಚಾಯತ್ ಸದಸ್ಯರು ಮತ್ತು ಮುಖಂಡರು ಜಿಲ್ಲಾ ಪಂಚಾಯತ್ ಸಿಇಒಗೆ ಆಗ್ರಹಿಸಿದ್ದಾರೆ.