ಕಲಬುರಗಿ:ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಕೆಲವೊಮ್ಮೆ ಪ್ರಮಾದಗಳು ನಡೆಯುತ್ತವೆ. ಆದರೆ ಇಲ್ಲೊಬ್ಬ ಸಹ ಶಿಕ್ಷಕನು ಶಾಲೆಗೆ ಬರೋಬ್ಬರಿ 11 ತಿಂಗಳು ಗೈರಾಗಿದ್ದರೂ ಆತನಿಗೆ ವೇತನ ಪಾವತಿಸಿ ಶಿಕ್ಷಣ ಇಲಾಖೆ ಪ್ರಮಾದ ಎಸಗಿರುವ ಆರೋಪ ಸಾಬೀತಾಗಿದೆ. ಈ ತಪ್ಪಿನ ಹಿನ್ನೆಲೆ ಮೂವರು ಅಧಿಕಾರಿ ಸಿಬ್ಬಂದಿಯನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಿ ಹಾಗೂ ಒಬ್ಬ ನಿವೃತ್ತ ಬಿಇಒಗೆ ನಿವೃತ್ತಿ ವೇತನದಲ್ಲಿ ಶಾಶ್ವತವಾಗಿ ಶೇ 50ರಷ್ಟು ವೇತನ ತಡೆ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.
ಆಳಂದ ತಾಲೂಕಿನ ಕೆರಿ ಅಂಬಲಗಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ರೇಣುಕಾಚಾರ್ಯ ಅವರು ಶಾಸಕರೊಬ್ಬರ ಸಹೋದರನಾಗಿದ್ದು, ಸತತ 11 ತಿಂಗಳು ಶಾಲೆಗೆ ಗೈರಾಗಿದ್ದರು. ಆದರೆ ಅವರಿಗೆ ವೇತನ ಬಿಡುಗಡೆ ಮಾಡಿದ ಆರೋಪ ಸಾಬೀತು ಆಗಿದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮಡಿ, ಪ್ರಥಮ ದರ್ಜೆ ಸಹಾಯಕ ಲೋಕಪ್ಪ ಜಾಧವ, ಗುರುರಾಜರಾವ್ ಕುಲಕರ್ಣಿ ಅವರನ್ನು ಸೇವೆಯಿಂದ ಇಲಾಖೆ ಕಡ್ಡಾಯ ನಿವೃತ್ತಿಗೊಳಿಸಿದೆ.
ಈ ಅವಧಿಯಲ್ಲಿ ಆಳಂದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಭರತರಾಜ ಸಾವಳಗಿ ಅವರು ಇತ್ತೀಚೆಗೆ ನಿವೃತ್ತಿ ಆಗಿದ್ದು, ಅವರಿಗೆ ಬರುವ ವೇತನದಲ್ಲಿ ಶಾಶ್ವತವಾಗಿ ಶೇ 50ರಷ್ಟು ನಿವೃತ್ತಿ ವೇತನ ತಡೆಹಿಡಿಯಲಾಗಿದೆ.