ಕಲಬುರಗಿ:ಈ ಹಿಂದೆ ಉಳಿಸಿಕೊಂಡಿದ್ದ ಬಾಕಿ ಬಿಲ್ನಿಂದ ನಗರದಲ್ಲಿರುವ 7 ಇಂದಿರಾ ಕ್ಯಾಂಟೀನ್ಗಳು ಇನ್ನೂ ಸಹ ಓಪನ್ ಅಗಿಲ್ಲ. ಇನ್ನೊಂದೆಡೆ ಕ್ಯಾಂಟೀನ್ ನಡೆಸಲು ಸಾಲ ಮಾಡಿಕೊಂಡಿದ್ದ ಏಜೆನ್ಸಿ ಮತ್ತು ನೌಕರರು ಬಾಕಿ ಬಿಲ್ಗಾಗಿ ಪರದಾಡುತ್ತಿದ್ದಾರೆ. ಹೀಗಾಗಿ ಬಾಕಿ 7 ಕೋಟಿ 30 ಲಕ್ಷ ಬಿಲ್ ಪಾವತಿ ಮಾಡುವಂತೆ ಸರ್ಕಾರಕ್ಕೆ ನೌಕರರು ಒತ್ತಾಯಿಸಿದ್ದಾರೆ.
ನೂತನ ಸರ್ಕಾರ ಬಂದ ಮೇಲೆ ರಾಜ್ಯದ ಬಹುತೇಕ ಕಡೆ ಕ್ಯಾಂಟೀನ್ನಲ್ಲಿ ಗುಣಮಟ್ಟದ ಹಾಗೂ ಡಿಫ್ರೆಂಟ್ ಫುಡ್ ಮೇನ್ಯೂ ಮಾಡಲಾಗಿದೆ. ಆದರೆ ಕಲಬುರಗಿ ನಗರದಲ್ಲಿ ಮಾತ್ರ 7 ಇಂದಿರಾ ಕ್ಯಾಂಟೀನ್ಗಳು ಕಳೆದ ಒಂಭತ್ತು ತಿಂಗಳಿನಿಂದ ಬಾಗಿಲು ಹಾಕಿಕೊಂಡಿವೆ. ಪಾಲಿಕೆ ಹಾಗೂ ಸರ್ಕಾರದಿಂದ ಸುಮಾರು ಏಳು ಕೋಟಿಗೂ ಅಧಿಕ ಹಣ ಬಾಕಿಯಿರುವ ಹಿನ್ನೆಲೆ ಸರಿಯಾಗಿ ನಿರ್ವಹಣೆ ಮಾಡಲಾಗದೆ ಟೆಂಡರ್ ಪಡೆದವರೂ ಕ್ಯಾಂಟೀನ್ ಬಂದ್ ಮಾಡಿದ್ದಾರೆ.
ಈ ಕುರಿತು ಸೆಪ್ಟಾ ಏಜೆನ್ಸಿ ನೌಕರರಾದ ಬಸಲಿಂಗಪ್ಪ ಬಾದರ್ಲಿ ಅವರು ಮಾತನಾಡಿ, 2018 ಫೆಬ್ರವರಿಯಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 7 ಇಂದಿರಾ ಕ್ಯಾಂಟೀನ್ಗಳನ್ನು ನಡೆಸುತ್ತಿದ್ದು, ಸಾರ್ವಜನಿಕರಿಗೆ ಊಟ ಹಾಗೂ ಉಪಹಾರಗಳನ್ನು ವಿತರಿಸುತ್ತ ಬಂದಿದ್ದೇವೆ. ಆದರೆ ಸುಮಾರು 30 ತಿಂಗಳಿಂದ ಸರ್ಕಾರದಿಂದ ಬರಬೇಕಿದ್ದ 7 ಕೋಟಿ 30 ಲಕ್ಷ ರೂ. ಸಹಾಯ ಧನ ಬಂದಿಲ್ಲ. ಇದರಿಂದಾಗಿ ನಮಗೆ ಸಾಕಷ್ಟು ನಷ್ಟವಾಗಿದೆ. ಇಲ್ಲಿನ ಸಿಬ್ಬಂದಿಗೆ 5 ತಿಂಗಳ ವೇತನ ನೀಡಿಲ್ಲ. ಕಿರಾಣಿ ಸಾಮಾಗ್ರಿಗಳು, ಗ್ಯಾಸ್, ತರಕಾರಿಗಳ ಬಾಕಿ ಮೊತ್ತವನ್ನು ನೀಡದೆ ಇರುವುದರಿಂದ ನಮ್ಮ ಮೇಲೆ ಒತ್ತಡವಿದೆ. ಹೀಗಾಗಿ ನಾವು ಅನಿವಾರ್ಯವಾಗಿ ಕ್ಯಾಂಟೀನ್ಗಳನ್ನು ಬಂದ್ ಮಾಡಬೇಕಾಗಿತ್ತು. ಆದರೂ ಸಹ ಸರ್ಕಾರ ಈ ಬಗ್ಗೆ ಗಮನಹರಿಸಿಲ್ಲ. ಅನೇಕ ಬಾರಿ ನಮಗೆ ಮಹಾಪೌರರು ಹಾಗೂ ಪಾಲಿಕೆ ಆಯುಕ್ತರು, ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಕ್ಯಾಂಟೀನ್ ಓಪನ್ ಮಾಡಿ ಎಂದು ಸೂಚನೆ ನೀಡಿದ್ದು, ಇತ್ತೀಚಿಗೆ ಕೇವಲ 50 ಲಕ್ಷ ರೂ. ಬಾಕಿ ಹಣವನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಇದು ಯಾವುದಕ್ಕೂ ಸಾಲದಂತಾಗಿದೆ. ನಾವು ಹೊರಗಡೆ ಕೊಡಬೇಕಾದ ಬಾಕಿ ಮೊತ್ತವೇ 3 ಕೋಟಿಗೂ ಹೆಚ್ಚಿದೆ. ಆದರಿಂದ ಆದಷ್ಟೂ ಬೇಗ ಬಾಕಿ ಉಳಿಸಿಕೊಂಡಿರುವ ಬಿಲ್ ಅನ್ನು ಬಿಡುಗಡೆ ಮಾಡಿದಲ್ಲಿ, ಪುನಃ ಕ್ಯಾಂಟೀನ್ ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದರು.