ಕರ್ನಾಟಕ

karnataka

By

Published : Jul 25, 2019, 5:53 AM IST

Updated : Jul 25, 2019, 7:28 AM IST

ETV Bharat / state

ಬೊಬ್ಬೆ ಹಾಕಿದ್ರೂ ಕಬ್ಬಿನ ಬಾಕಿ ಬಿಲ್​ ಕೊಡದ ಕಾರ್ಖಾನೆಗಳು: ರೈತರಿಂದ ಆಕ್ರೋಶ

ತಾವು ಬೆಳೆದ ಕಬ್ಬನ್ನು ಸಕ್ಕರೆ ಕಾರ್ಖಾನೆಗಳಿಗೆ ನೀಡಿ ಬಿಲ್ ಬಾರದಕ್ಕೆ ತೊಂದರೆ ಅನುಭವಿಸುತ್ತಿದ್ದೇವೆ. ಪ್ರತಿ ವರ್ಷ ಕಬ್ಬಿನ ಬಿಲ್​ಗಾಗಿ ಹೋರಾಟ ಮಾಡಿ ಕಂಗಾಲಾಗಿದ್ದೇವೆ ಎಂದು ಕಲಬುರಗಿ ಜಿಲ್ಲೆಯ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ‌.

ಆಕ್ರೋಶ ವ್ಯಕ್ತಪಡಿಸುತ್ತಿರುವ ರೈತರು

ಕಲಬುರಗಿ: ಪ್ರತಿ ವರ್ಷ ಕಬ್ಬು ಬೆಳೆದ ರೈತರು ಎಷ್ಟೇ ಬೊಬ್ಬೆ ಹಾಕಿದ್ರೂ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಮಾತ್ರ ಕೇಳುತ್ತಿಲ್ಲ. ರೈತರು ಸಾಕಷ್ಟು ಹೋರಾಟ ಮಾಡಿದರೂ ಕಬ್ಬಿನ ಬಾಕಿ ಬಿಲ್ ಮಾತ್ರ ಜಪ್ಪಯ್ಯ ಅಂದ್ರೂ ಕೊಡುತ್ತಿಲ್ಲ.

ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳು 55 ಕೋಟಿಗೂ ಅಧಿಕ ಹಣ ಬಾಕಿ ಉಳಿಸಿಕೊಂಡಿವೆ. ಸಾಲ ಮಾಡಿ ಕಬ್ಬು ಬೆಳೆದ ರೈತರು ಮಾತ್ರ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ನೀಡಿ ಬದುಕು ಕಹಿ ಮಾಡಿಕೊಂಡಿದ್ದಾರೆ. ರೈತರಿಗೆ ಬಾಕಿ ಹಣ ನೀಡಿ ಅಂತ ಸರ್ಕಾರ ಗಡುವು ನೀಡಿದ ನಂತರವೂ ಜಿಲ್ಲೆಯ ಕೆಲ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿರೋದು ದುರಂತವೇ ಸರಿ.

ಕಬ್ಬು ಬೆಳೆಗಾರರ ಪ್ರತಿಭಟನೆ

ಜಿಲ್ಲೆಯ ವ್ಯಾಪ್ತಿಗೆ ಒಟ್ಟು ನಾಲ್ಕು ಕಾರ್ಖಾನೆಗಳು ಬರುತ್ತಿದ್ದು, ಒಂದು ಕಾರ್ಖಾನೆ ಮಾತ್ರ ಪೂರ್ಣವಾಗಿ ಕಬ್ಬಿನ ಬಿಲ್ ಪಾವತಿಸಿದರೆ, ಉಳಿದ ಮೂರು ಕಾರ್ಖಾನೆಗಳು ಹೆಚ್ಚಿನ ಪ್ರಮಾಣದಲ್ಲಿ ಬಾಕಿ ಉಳಿಸಿಕೊಂಡಿವೆಯಂತೆ.

ಜಿಲ್ಲೆಯ ನಾಲ್ಕೂ ಕಾರ್ಖಾನೆಗಳು ಕೊಡಬೇಕಾಗಿದ್ದ ಕಬ್ಬಿನ ಬಿಲ್ - 597 ಕೋಟಿ ರೂ.ಗಳು. ಇದುವರೆಗೂ ಪಾವತಿಸಿರುವ ಕಬ್ಬಿನ ಬಿಲ್ - 520 ಕೋಟಿ ರೂ.ಗಳು. ಆದರೆ ಇನ್ನೂ 55 ಕೋಟಿ ರೂ. ಬಾಕಿ ಹಣವನ್ನು ರೈತರಿಗೆ ಪಾವತಿಸಬೇಕಿದೆ. ಜೇವರ್ಗಿ ತಾಲೂಕಿನ ಉಗಾರ್ಸ್ ಸಕ್ಕರೆ ಕಾರ್ಖಾನೆ 3.50 ಕೋಟಿ, ಆಳಂದ ತಾಲೂಕಿನ ಎನ್.ಎಸ್.ಎಲ್ ಶುಗರ್ಸ್ 34 ಕೋಟಿ ರೂ. ಹಾಗೂ ಯಾದಗಿರಿ ಜಿಲ್ಲೆಯ ತುಕೂರಿನಲ್ಲಿರುವ ಕೋರ್ ಗ್ರೀನ್ 28 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ ಎಂದು ಜಿಲ್ಲಾಧಿಕಾರಿ ಜಗದೀಶ್​ ಪಾಟೀಲ್​ ಮಾಹಿತಿ ನೀಡಿದ್ದಾರೆ.

ಈ ಕುರಿತು ಬಹಳಷ್ಟು ಸಲ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲೆಯಲ್ಲಿ ಬರಗಾಲ ತಾಂಡವವಾಡ್ತಿದ್ದು, ಈಗ ರೈತರಿಗೆ ಕಬ್ಬು ಬೆಳೆಯಲು ನೀರಿನ ಕೊರತೆ ಉಂಟಾಗಿದೆ. ಮೈತ್ರಿ ಸರ್ಕಾರ ಪತನವಾಗಿದ್ದು, ಬಿಜೆಪಿ ಆಡಳಿತಕ್ಕೆ ಬರಲಿದೆ. ಈಗಲಾದರೂ ಸರ್ಕಾರ ರೈತರ ನೆರವಿಗೆ ಬಂದು ಕಬ್ಬು ಬೆಳೆಗಾರರ ಬಾಕಿ ಕೊಡಿಸಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎನ್ನುತಾರೆ ರೈತರು.

ನಾವು ಕಷ್ಟಪಟ್ಟು ಬೆಳೆದ ಸಿಹಿ ಕಬ್ಬನ್ನು ಸಕ್ಕರೆ ಕಾರ್ಖಾನೆಗಳಿಗೆ ನೀಡಿ ಬಿಲ್ ಬರದೇ ಇರುವುರಿಂದ ತೊಂದರೆ ಅನುಭವಿಸುತ್ತಿದ್ದೇವೆ. ಪ್ರತಿ ವರ್ಷ ಕಬ್ಬಿನ ಬಿಲ್​ಗಾಗಿ ಹೋರಾಟ ಮಾಡಿ ಕಂಗಾಲಾಗಿದ್ದೇವೆ ಎಂದು ಕಬ್ಬು ಬೆಳಗಾರರ ಸಂಘದ ಜಿಲ್ಲಾಧ್ಯಕ್ಷ ಆರ್​ ವೆಂಕಟೇಶ್​ ಕುಮಾರ್​ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ‌.

Last Updated : Jul 25, 2019, 7:28 AM IST

For All Latest Updates

TAGGED:

ABOUT THE AUTHOR

...view details