ಕಲಬುರಗಿ: ಆಪರೇಷನ್ ಕಮಲ ಆಡಿಯೋ ಪ್ರಕರಣದ ತನಿಖೆಯ ತಡೆಯಾಜ್ಞೆ ತೆರವುಗೊಳಿಸುವಂತೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನ ಕಲಬುರಗಿ ಹೈಕೋರ್ಟ್ ಇಂದು ಕೈಗೆತ್ತಿಕೊಳ್ಳಲಿದೆ.
ಇಂದು ಮಧ್ಯಾಹ್ನ 2:30ರ ನಂತರ ನ್ಯಾಯಪೀಠ ವಿಚಾರಣೆ ನಡೆಸಲಿದೆ. ಶಾಸಕ ನಾಗನಗೌಡ ಕಂದಕೂರ ಜೆಡಿಎಸ್ ತೊರೆದು ಬಿಜೆಪಿಗೆ ಬಂದರೆ ಹತ್ತುಕೋಟಿ ರೂಪಾಯಿ ನೀಡುವುದಾಗಿ ಬಿಎಸ್ವೈ ಹೇಳಿದ ಆಡಿಯೋವನ್ನ ಶಾಸಕ ನಾಗನಗೌಡ ಪುತ್ರ ಶರಣಗೌಡ ಬಹಿರಂಗಗೊಳಿಸಿದ್ದರು. ಈ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಮತ್ತೊಂದು ಕಡೆ ಕಲಬುರಗಿ ಹೈಕೋರ್ಟ್ ಮೊರೆಹೋಗಿದ್ದ ಬಿಎಸ್ವೈ ತನಿಖೆಗೆ ತಡೆಯಾಜ್ಞೆ ತಂದಿದ್ದರು. ಬಳಿಕ ತಡೆಯಾಜ್ಞೆ ತೆರವಿಗಾಗಿ ಶರಣಗೌಡ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಶರಣಗೌಡ ಪರ ಈಗಾಗಲೇ ಹಿರಿಯ ವಕೀಲ ರವಿವರ್ಮ ಕುಮಾರ್ ವಾದ ಮಂಡಿಸಿದ್ದಾರೆ. ಕಳೆದ ಅಕ್ಟೋಬರ್ 25 ರಂದು ನಡೆದ ಕೋರ್ಟ್ ಕಲಾಪಕ್ಕೆ ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಗೈರಾಗಿದ್ದ ಕಾರಣ ಪ್ರಕರಣ ಇಂದಿಗೆ ಮುಂದೂಡಲಾಗಿತ್ತು.
ಆಪರೇಷನ್ ಕಮಲ ಆಡಿಯೋ ಪ್ರಕರಣ: ಇಂದು ಕಲಬುರಗಿ ಹೈಕೋರ್ಟ್ನಲ್ಲಿ ವಿಚಾರಣೆ - ಕಲಬುರಗಿ ಹೈಕೋರ್ಟ್ನಲ್ಲಿ ವಾದ ಮಂಡನೆ
ಆಪರೇಷನ್ ಕಮಲ ಆಡಿಯೋ ಪ್ರಕರಣದ ತನಿಖೆಯ ತಡೆಯಾಜ್ಞೆ ತೆರವುಗೊಳಿಸುವಂತೆ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಕಲಬುರಗಿ ಹೈಕೋರ್ಟ್ ಇಂದು ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲಿದೆ.
ವಾದ ಮಂಡನೆ
ಇಂದು ಬಿಎಸ್ವೈ ಪರ ವಕೀಲ ಸಿವಿ ನಾಗೇಶ ಕೋರ್ಟ್ ಗೆ ಹಾಜರಾಗಲಿದ್ದಾರೆ. ಆದರೆ ಶರಣಗೌಡ ಪರ ನ್ಯಾಯವಾದಿ ರವಿವರ್ಮ ಕಾರಣಾಂತರಗಳಿಂದ ಇಂದು ಗೈರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹಾಗೊಂದು ವೇಳೆ ರವಿವರ್ಮ ಹಾಜರಾದರೂ ಮತ್ತಷ್ಟು ವಾದ ಮಾಡಲಿದ್ದಾರೆ. ನ್ಯಾಯಾಲಯದ ಸಮಯ ಉಳಿದರೆ ಬಿಎಸ್ವೈ ಪರ ನ್ಯಾಯವಾದಿ ಸಿವಿ ನಾಗೇಶ ವಾದ ಮಂಡಿಸಲಿದ್ದಾರೆ. ಬಳಿಕ ಹೈಕೊರ್ಟ್ ತೀರ್ಪು ನೀಡಲಿದೆ.
ಒಟ್ಟಾರೆ ಇಂದಿನ ಹೈಕೋರ್ಟ್ ವಿಚಾರಣೆ ತೀವ್ರ ಕುತೂಹಲ ಕೆರಳಿಸಿದೆ.