ಕಲಬುರಗಿ:ಆ ಮಗು ಆಡಿ ಬೆಳೆಯಬೇಕಾದ ಪುಟ್ಟ ಕಂದಮ್ಮ, ಆದರೆ, ಒಂದು ವರ್ಷದ ಆ ಮಗುವಿನಲ್ಲಿ ಕಾಣಿಸಿಕೊಂಡ 'ಥಲಸ್ಸೇಮಿಯಾ' ಎಂಬ ಅಪರೂಪದ ಕಾಯಿಲೆ ಕಂದಮ್ಮನ ಪ್ರಾಣ ಹಿಂಡುತ್ತಿದೆ. ಇತ್ತ ಮಗುವಿನ ಚಿಕಿತ್ಸೆ ವೆಚ್ಚ ಕೂಡಾ ಬರಿಸಲು ಆಗದೇ ಹೆತ್ತವರು ಸಹಾಯ ಹಸ್ತದ ನೀರಿಕ್ಷೆಯಲ್ಲಿದ್ದಾರೆ.
ಮೂಲತಃ ಕಲಬುರಗಿ ಜಿಲ್ಲೆ ಶಹಬಾದ ಪಟ್ಟಣ ನಿವಾಸಿಗಳಾದ ಕೃಷ್ಣಾ ಹಾಗೂ ರೇಣುಕಾ ದಂಪತಿಯ ದ್ವಿತಿಯ ಪುತ್ರಿ ಶ್ರೇಷ್ಠಾ. ಶ್ರೇಷ್ಠಾ ದೇಹದಲ್ಲಿ ಅಪರೂಪವಾದ ಥಲಸ್ಸೇಮಿಯಾ ಎಂಬ ಮಾರಕ ಕಾಯಿಲೆ ಕಾಣಿಸಿಕೊಂಡಿದೆ. ದೇಹದಲ್ಲಿ ರಕ್ತ ಉತ್ಪತ್ತಿಯಾಗಲು ಬಿಡದ ಥಲಸ್ಸೇಮಿಯಾ ಕಾಯಿಲೆ. ದೇಹದಲ್ಲಿ ಕೆಂಪು ರಕ್ತ ಕಣಗಳು ಉತ್ಪತ್ತಿಯಾಗದಂತೆ ಮಾಡುತ್ತದೆ.
ಕಾಯಿಲೆ ಗುಣಪಡಿಸಲು ಬೋನ್ ಮ್ಯಾರೋ ಕಸಿ ಮಾಡಬೇಕು. ಈ ಶಸ್ತ್ರಚಿಕಿತ್ಸೆಗೆ ಸುಮಾರು 25 ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದು, ಬಡ ದಂಪತಿಗಳಿಗೆ ದಿಕ್ಕು ತೋಚದಂತಾಗಿದೆ. ದೊಡ್ಡ ಮೊತ್ತ ಹೊಂದಿಸಲು ಆಗದೇ ಮಗಳ ಈ ಸ್ಥಿತಿ ನೆನೆದು ತಂದೆ, ತಾಯಿ ಮಮ್ಮಲ ಮರುಗುತ್ತಿದ್ದಾರೆ.