ಕರ್ನಾಟಕ

karnataka

ETV Bharat / state

ಸೇಡಂ ಪುರಸಭೆಗೆ ಸರ್ಕಾರದಿಂದ ಅಧಿಸೂಚನೆ: ರಾಜಕೀಯ ಪಕ್ಷಗಳಲ್ಲಿ ಸಂಚಲನ... - Sedam Municipality election 2020

ಸೇಡಂನ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿರುವ ಸರ್ಕಾರ ಚುನಾವಣೆಯ ದಿನಾಂಕವನ್ನೂ ಸಹ ಅಂತಿಮಗೊಳಿಸಿದೆ. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ “ಸಾಮಾನ್ಯ ಮಹಿಳೆ” ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ “ಸಾಮಾನ್ಯ” ಕ್ಷೇತ್ರವೆಂದು ಮೀಸಲಾತಿ ಪ್ರಕಟಿಸಲಾಗಿದೆ.

Notification by the Government to the Sedam Municipality election
ಸೇಡಂ ಪುರಸಭೆಗೆ ಸರ್ಕಾರದಿಂದ ಅಧಿಸೂಚನೆ

By

Published : Nov 5, 2020, 7:34 PM IST

ಸೇಡಂ: ಇಲ್ಲಿನ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿ ಸರ್ಕಾರ ಅಧಿಸೂಚನೆ ಹೊರಡಿಸಿ, ಈಗ ಚುನಾವಣೆಯ ದಿನಾಂಕವನ್ನೂ ಸಹ ಅಂತಿಮಗೊಳಿಸಿದ್ದು, ರಾಜಕೀಯ ಪಕ್ಷಗಳಲ್ಲಿ ಸಂಚಲನ ಶುರುವಾಗಿದೆ.

ಈಗಾಗಲೇ ಬಹುಸಂಖ್ಯಾ ಸದಸ್ಯರನ್ನು ಹೊಂದಿರುವ ಬಿಜೆಪಿ ಪಕ್ಷದ ಸದಸ್ಯರು ತೆಲಂಗಾಣ ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದು, ಕಾಂಗ್ರೆಸ್​​ ತನ್ನ ತಂತ್ರಗಳನ್ನು ಹೆಣೆಯುವಲ್ಲಿ ತಲ್ಲೀನವಾಗಿದೆ.

23 ಸದಸ್ಯ ಬಲದ ಪುರಸಭೆಯಲ್ಲಿ 13 ಜನ ಬಿಜೆಪಿ ಮತ್ತು 10 ಜನ ಕಾಂಗ್ರೆಸ್​ ಚುನಾಯಿತ ಪ್ರತಿನಿಧಿಗಳಿದ್ದಾರೆ. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ “ಸಾಮಾನ್ಯ ಮಹಿಳೆ” ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ “ಸಾಮಾನ್ಯ” ಕ್ಷೇತ್ರವೆಂದು ಮೀಸಲಾತಿ ಪ್ರಕಟಿಸಲಾಗಿದೆ. ಅದರನ್ವಯ ಅಧ್ಯಕ್ಷ ಸ್ಥಾನಕ್ಕಾಗಿ ವಿದ್ಯಾನಗರ ವಾರ್ಡ್​ ನಂ. 12 ರ ಸದಸ್ಯೆ ಚನ್ನಮ್ಮ ಪಾಟೀಲ, ಅಗ್ಗಿ ಬಸವೇಶ್ವರ ಕಾಲೋನಿಯ ವಾರ್ಡ್​ ನಂ. 23ರ ಸದಸ್ಯೆ ಶೋಭಾ ಹೂಗಾರ ಮತ್ತು ವಾರ್ಡ್​ ನಂ. 22ರ ಚೋಟಿಗಿರಣಿ ಬಡಾವಣೆಯ ಸಕ್ಕುಬಾಯಿ ರಾಮದಾಸ ಪವಾರ ಪ್ರಮುಖ ಆಕಾಂಕ್ಷಿಗಳ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಉಪಾಧ್ಯಕ್ಷ ಸ್ಥಾನಕ್ಕಾಗಿ ಪಟೇಲ ಗಲ್ಲಿ ವಾರ್ಡ್​ ನಂ. 2ರ ಸದಸ್ಯ ಶಿವಾನಂದಸ್ವಾಮಿ ರೇಸ್​ನಲ್ಲಿದ್ದಾರೆ.

ಈ ಪೈಕಿ ಚನ್ನಮ್ಮ ಪಾಟೀಲ್​ಗೆ ಅಧ್ಯಕ್ಷ ಗಾದಿ ದಕ್ಕುವುದು ಬಹುತೇಕ ಖಚಿತ ಎನ್ನಲಾಗಿದೆ. ಆಕಾಂಕ್ಷಿಗಳ ಸಂಖ್ಯೆ ಮತ್ತು ಪೈಪೋಟಿ ಜಾಸ್ತಿಯಾದ ಪ್ರಯುಕ್ತ ಎರಡು ಅವಧಿಯಲ್ಲಿ ಅಧಿಕಾರ ಹಂಚಿಕೆ ಮಾಡುವ ಕುರಿತು ಸಹ ಬಿಜೆಪಿ ಪಕ್ಷದಲ್ಲಿ ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಈಗ ಕಡೆಯ ಹಂತದ ನಿರ್ಧಾರ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಕೈಯಲ್ಲಿದ್ದು, ನವೆಂಬರ್ 7 ರಂದು ನಡೆಯುವ ಚುನಾವಣೆಯಲ್ಲಿ ಯಾರ ಪಾಲಿಗೆ ಪುರಸಭೆ ಎಂಬುದು ಬಹಿರಂಗವಾಗಲಿದೆ.

ಇನ್ನೊಂದೆಡೆ ಕಾಂಗ್ರೆಸ್​​​ ಪಕ್ಷವೂ ಸಹ ತೆರೆಮರೆಯಲ್ಲಿ ಸದಸ್ಯರನ್ನು ಸೆಳೆಯುವ ತಂತ್ರ ನಡೆಸಿದೆ ಎಂದು ತಿಳಿದು ಬಂದಿದೆ. ಇದರೊಟ್ಟಿಗೆ ಕೆಲ ಬಿಜೆಪಿ ಸದಸ್ಯರು ಸಹ ಪಕ್ಷ ಪರ್ಯಟನೆ ಮಾಡುವ ತವಕದಲ್ಲಿದ್ದಾರೆ ಎನ್ನಲಾಗಿದೆ. ಕಡೆ ಕ್ಷಣದಲ್ಲಿ ಮೂರ್ನಾಲ್ಕು ಜನ ಬಿಜೆಪಿ ಸದಸ್ಯರು ಅಸಮಾಧಾನ ಹೊರಹಾಕುವ ಸಾಧ್ಯತೆಗಳನ್ನೂ ಸಹ ತಳ್ಳಿಹಾಕುವಂತಿಲ್ಲ.

ABOUT THE AUTHOR

...view details