ಕಲಬುರಗಿ:ದೇಶದಲ್ಲಿ ಜಾರಿಯಾದ ನೂತನ ಪರಿಷ್ಕೃತ ಸಂಚಾರಿ ನಿಯಮ ಉಲ್ಲಂಘನೆ ದುಬಾರಿ ದಂಡ ದರಪಟ್ಟಿ ರಾಜ್ಯದಲ್ಲಿಯೂ ಜಾರಿಗೆ ಬಂದಿದ್ದು, ಕಲಬುರಗಿ ಜಿಲ್ಲೆಯಲ್ಲಿ ಕುಡಿದು ವಾಹನ ಚಲಾಯಿಸಿದ ವ್ಯಕ್ತಿಗೆ ಟ್ರಾಫಿಕ್ ಪೊಲೀಸರು 10 ಸಾವಿರ ರೂ.ದಂಡ ವಿಧಿಸಿ ಆತನ ನಶೆ ಇಳಿಸಿದ್ದಾರೆ.
ಮಧ್ಯಾಹ್ನ ಹೊತ್ತಿನಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ ಬಿರನಳ್ಳಿ ಗ್ರಾಮದ ರಮೇಶ ಎಂಬಾತನಿಗೆ ಚಿಂಚೋಳಿ ತಾಲೂಕಿನ ಸುಲೇಪೇಟ್ ಪೊಲೀಸರು ನೂತನ ದರಪಟ್ಟಿ ಅನ್ವಯ ₹10 ಸಾವಿರ ದಂಡ ವಿಧಿಸಿದ್ದಾರೆ. ನ್ಯಾಯಾಲಯಕ್ಕೆ ದಂಡ ಪಾವತಿಸುವಂತೆ ಆತನ ಕೈಗೆ ನೋಟಿಸ್ ಕೊಟ್ಟಿದ್ದಾರೆ.
ವಾಹನ ಚಾಲಕರೇ ಇತ್ತ ಗಮನಿಸಿ.. ನಿಯಮ ಉಲ್ಲಂಘನೆಗೆ ಎಷ್ಟು ದಂಡ:
ಹೆಲ್ಮೆಟ್ ಧರಿಸದಿದ್ರೆ ₹1000, ವಾಹನ ಚಾಲನೆ ಲೈಸೆನ್ಸ್ ಇಲ್ದಿದ್ರೆ ₹5000, ವಾಹನ ಇನ್ಸೂರೆನ್ಸ್ ಇಲ್ಲದಿದ್ರೆ ₹2000, ಮದ್ಯಪಾನ ಮಾಡಿ ವಾಹನ ಚಲಿಸಿದರೆ ₹10000, ಸೀಟ್ ಬೆಲ್ಟ್ ಹಾಕದಿದ್ದರೆ ₹1000, ಮಿತಿಮೀರಿದ ವೇಗ ಚಾಲನೆಗೆ ₹2000, ವಾಹನ ಚಲಾಯಿಸುವಾಗ ಮೊಬೈಲ್ ಬಳಸಿದರೆ ₹5000, ಲೈಸೆನ್ಸ್ ರದ್ದಾಗಿದ್ರೂ ವಾಹನ ಚಲಿಸಿದರೆ ₹10000, ಪರವಾನಿಗೆ ಇಲ್ಲದೆ ರಸ್ತೆಗೆ ಇಳಿದರೆ ₹10000, ಪೊಲೀಸರ ಜೊತೆ ವಾಗ್ವಾದ ಮಾಡಿದರೆ ₹2000, ಮಿತಿಮೀರಿದ ಸರಕು ಸಾಗಾಣಿಕೆ ₹20000, ಆ್ಯಂಬುಲೆನ್ಸ್‌ಗೆ ದಾರಿ ಬಿಡದಿದ್ರೆ ₹10000, ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡಲು ನೀಡಿದರೆ ಪೋಷಕರಿಗೆ ಅಥವಾ ವಾಹನ ಮಾಲೀಕರಿಗೆ ₹5000 ದಂಡ ವಿಧಿಸಬಹುದಾಗಿದೆ.
ಯಾವುದಕ್ಕೂ ವಾಹನ ಸವಾರರೇ ಎಚ್ಚರವಹಿಸಿ, ಪೊಲೀಸರಿಗೆ ದುಬಾರಿ ದಂಡ ಕಟ್ಟುವ ಬದಲಾಗಿ ಸಾರಿಗೆ ನಿಯಮಗಳನ್ನ ಪಾಲನೆ ಮಾಡಿ.