ಕಲಬುರಗಿ: ದೇಶಕ್ಕೆ ಸ್ವಾತಂತ್ರ್ಯ ಬಂದು ಬರೋಬ್ಬರಿ 73 ವರ್ಷಗಳು ಉರುಳಿವೆ. ಆದರೂ, ರಾಜ್ಯದ ಅದೆಷ್ಟೋ ಹಳ್ಳಿಗಳ ಜನರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಯ ಖಾದ್ಯಾಪುರ ಗ್ರಾಮ ಕೂಡ ಸೇರಿದೆ.
ಹೌದು, ಈ ಊರಿಗೆ ಬಸ್ ಸೌಲಭ್ಯ ಇಲ್ಲದ ಕಾರಣ ಮಕ್ಕಳ ಶಿಕ್ಷಣದ ಭವಿಷ್ಯ ಕಮರಿ ಹೋಗುತ್ತಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಖಾದ್ಯಾಪುರ ಗ್ರಾಮಸ್ಥರು ಕಳೆದ ಏಳು ದಶಕಗಳಿಂದ ಸಾರಿಗೆ ಬಸ್ಗಾಗಿ ಹೋರಾಟ ನಡೆಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 150 ರಿಂದ ಕೇವಲ 5 ಕಿ.ಮೀ ದೂರದ ಖಾದ್ಯಾಪುರ ಗ್ರಾಮಕ್ಕೆ ಸೂಕ್ತ ಡಾಂಬರ್ ರಸ್ತೆ ಇದ್ದರೂ ಬಸ್ ಸೌಲಭ್ಯ ಕಲ್ಪಿಸಿಲ್ಲ.
ಬಸ್ ಸೌಲಭ್ಯ ಇಲ್ಲದ ಕಾರಣ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸುವ ವಿದ್ಯಾರ್ಥಿಗಳು ಶಾಲೆಯನ್ನು ಅರ್ಧಕ್ಕೆ ಬಿಡುತ್ತಿದ್ದಾರೆ. ಪ್ರೌಢಶಾಲೆ, ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳು ಮುಖ್ಯ ರಸ್ತೆಯಿಂದ 5 ಕಿಮೀ ದೂರ ನಿರ್ಜನ ಪ್ರದೇಶದಲ್ಲಿ ನಡೆದುಕೊಂಡು ಹೋಗಬೇಕು. ಹೀಗಾಗಿ ಏನಾದ್ರು ಅನಾಹುತ ಸಂಭವಿಸಬಹುದು ಎಂದು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಪ್ರಾಥಮಿಕ ಶಿಕ್ಷಣದ ಬಳಿಕ ಖಾದ್ಯಾಪುರ ಗ್ರಾಮದ ನೂರಾರು ವಿದ್ಯಾರ್ಥಿಗಳ ಭವಿಷ್ಯ ಹೊಲ- ಗದ್ದೆಗಳಲ್ಲಿ ಕಮರಿ ಹೋಗುತ್ತಿದೆ.