ಕಲಬುರಗಿ:ಯುವಕರಿಗೆ ಸರ್ಕಾರಿ ಉದ್ಯೋಗ ಸಿಗಲು ಸಹಕಾರವಾಗಲಿ ಎಂಬ ಉದ್ದೇಶದಿಂದ ಉದ್ಯೋಗ ವಿನಿಮಯ ಕೇಂದ್ರ ತೆರೆಯಲಾಗಿದ್ದರೂ ಕೊರೊನಾದಿಂದ ಯಾವೊಬ್ಬ ಅಭ್ಯರ್ಥಿಯೂ ಸುಳಿಯುತ್ತಿಲ್ಲ.
ಕೋವಿಡ್ನಿಂದ ಉದ್ಯೋಗ ವಿನಿಮಯ ಕೇಂದ್ರದತ್ತ ಬಾರದ ಯುವಕರು
ಡಿಜಿಟಲ್ ಯುಗದಿಂದ ಉದ್ಯೋಗ ವಿನಿಮಯ ಕೇಂದ್ರದತ್ತ ಯುವಕರು ಸುಳಿಯದಿರುವ ಕಾರಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಪರ್ಯಾಯ ಕೆಲಸಕ್ಕೆ ನಿಯೋಜಿಸುವಂತಾಗಿದೆ.
ಪ್ರತಿಯೊಬ್ಬರ ಕೈಯಲ್ಲೂ ಆ್ಯಂಡ್ರಾಯ್ಡ್ ಮೊಬೈಲ್ ಇದ್ದು, ಬಹುತೇಕ ಕೆಲಸಗಳು ಅಂಗೈಯಲ್ಲೇ ಮುಗಿಯುತ್ತಿವೆ. ಮೊಬೈಲ್ನಲ್ಲೇ ಉದ್ಯೋಗಕ್ಕೆ ಅಪ್ಲಿಕೇಶನ್ ಹಾಕುತ್ತಿದ್ದಾರೆ. ಹೀಗಾಗಿ ಉದ್ಯೋಗ ಖಾಲಿ ಇರುವ ಕುರಿತು ಮಾಹಿತಿ ನೀಡಲು ಮುಖ್ಯ ಪಾತ್ರ ವಹಿಸುತ್ತಿದ್ದ ಕೇಂದ್ರದ ಉಪಯೋಗ ಇಲ್ಲವೇನೋ ಎಂಬಂತಾಗಿದೆ.
ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದರೆ ಸಾಕು ಹೆಸರು ನೋಂದಾಯಿಸಿಕೊಳ್ಳಲು ಕೇಂದ್ರದ ಮುಂದೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದ ಅಭ್ಯರ್ಥಿಗಳು, ಇದೀಗ ತಿರುಗಿ ಸಹ ನೋಡುತ್ತಿಲ್ಲ. ಕಳೆದ ವರ್ಷ 1,222 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಈ ವರ್ಷ ಕೇವಲ 377 ಅಭ್ಯರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಕೋವಿಡ್ ಸೇರಿ ಹಲವು ಕಾರಣಗಳಿಂದ ಅಭ್ಯರ್ಥಿಗಳು ಕೇಂದ್ರಕ್ಕೆ ಬರುತ್ತಿಲ್ಲ ಎನ್ನುತ್ತಾರೆ ವಿನಿಮಯ ಕೇಂದ್ರದ ಅಧಿಕಾರಿಗಳು.