ಬೆಂಗಳೂರು: ಆಸ್ತಿ ವಿವರಗಳನ್ನು ಸಲ್ಲಿಸದ ಗ್ರಾಮ ಪಂಚಾಯತ್ ಸದಸ್ಯರನ್ನು ಅವರ ಸ್ಥಾನದಿಂದ ಅನರ್ಹಗೊಳಿಸಲು ಶೋಕಾಸ್ ನೋಟಿಸ್ ನೀಡುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮೊಘಾ ಗ್ರಾಮ ಪಂಚಾಯತ್ ಸದಸ್ಯೆ ಲಲಿತಾಬಾಯಿ ಪಾಟೀಲ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ ಈ ಆದೇಶವನ್ನು ನೀಡಿದೆ. ಹೀಗಾಗಿ ಗ್ರಾಮ ಪಂಚಾಯತ್ ಸದಸ್ಯರು ಇನ್ನು ಮುಂದೆ ಆಸ್ತಿ ವಿವರ ಸಲ್ಲಿಸಲು ಶೋಕಾಸ್ ನೋಟಿಸ್ ಬರಲಿ ಎಂದು ಕಾಯುವಂತಿಲ್ಲ.
ಒಂದು ವೇಳೆ ತಡವಾಗಿ ಆಸ್ತಿ ವಿವರ ಸಲ್ಲಿಸಿ ಅದು ಸ್ವೀಕೃತವಾಗಿರದಿದ್ದರೆ ಅಥವಾ ಸಲ್ಲಿಸಿದ ವಿವರಗಳು ಸುಳ್ಳಾಗಿದ್ದರೆ ಅಂತಹ ಸಂದರ್ಭದಲ್ಲಿ ಶೋಕಾಸ್ ನೋಟಿಸ್ ನೀಡಬೇಕಾದ ಸ್ಥಿತಿ ಇತ್ತು. ಆದರೆ ಈ ಪ್ರಕರಣದಲ್ಲಿ ಅಲ್ಲ ಎಂದು ಹೈಕೋರ್ಟ್ ಹೇಳಿದೆ. ಅಲ್ಲದೆ, ಈ ಪ್ರಕರಣದಲ್ಲಿ ಅರ್ಜಿದಾರರು ಆಸ್ತಿ ವಿವರ ಸಲ್ಲಿಸಬೇಕಾಗಿದ್ದು, ಸಾಂವಿಧಾನಿಕ ಕರ್ತವ್ಯವಾಗಿದೆ. ಆ ಕರ್ತವ್ಯ ನಿಭಾಯಿಸಿಲ್ಲ. ನಿಗದಿತ ಅವಧಿ ಮುಗಿದ ನಂತರ 10 ತಿಂಗಳು ಕಾದ ಬಳಿಕ ಚುನಾವಣಾ ಆಯೋಗ ಅನರ್ಹತೆ ಆದೇಶವನ್ನು ಹೊರಡಿಸಿದೆ. ಆಯೋಗದ ಕ್ರಮ ಸರಿಯಾಗಿಯೇ ಇದೆ. ಅದರಲ್ಲಿ ಯಾವುದೇ ಲೋಪವಿಲ್ಲ ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1992ರ ಸೆಕ್ಷನ್ 43ಬಿ(1) ಅಡಿಯಲ್ಲಿ ಯಾವುದೇ ಗ್ರಾಮ ಪಂಚಾಯತ್ ಸದಸ್ಯರು ಚುನಾಯಿತರಾದ ದಿನಾಂಕದಿಂದ ಅಥವಾ ಅಧಿಕಾರ ವಹಿಸಿಕೊಂಡ ಮೂರು ತಿಂಗಳೊಳಗೆ ರಾಜ್ಯ ಚುನಾವಣಾ ಆಯೋಗ ನಿಗದಿಪಡಿಸಿರುವ ನಮೂನೆಯಲ್ಲಿ ಸಂಬಂಧಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೂಲಕ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಬೇಕು ಎಂದು ನಿಯಮವಿದೆ.
ಈ ಪ್ರಕರಣದಲ್ಲಿ 2020ರ ಡಿ.20ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಅರ್ಜಿದಾರರು 2021ರ ಜ.18ರಂದು ಮೊದಲ ಸಭೆಗೆ ಹಾಜರಾಗಿದ್ದಾರೆ. ಅಂದೇ ಎಲ್ಲ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ್ದಾರೆ, ಜೊತೆಗೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯೂ ನಡೆದಿದೆ. ಮೂರು ತಿಂಗಳಲ್ಲಿ ಅಂದರೆ 2021ರ ಏ.18ರೊಳಗೆ ಅವರು ಆಸ್ತಿ ವಿವರಗಳನ್ನು ಸಲ್ಲಿಸಬೇಕಿತ್ತು. ಆದರೆ ಅರ್ಜಿದಾರರು ಸಲ್ಲಿಸಿರಲಿಲ್ಲ. 2021ರ ಡಿ.31ರಂದು ಅರ್ಜಿದಾರರಿಗೆ ಮೊದಲ ನೋಟಿಸ್ ನೀಡಿ 2022ರ ಜ.15ರೊಳಗೆ ವಿವರಗಳನ್ನು ಸಲ್ಲಿಸಲು ಸೂಚನೆ ನೀಡಲಾಗಿತ್ತು. ಆದರೆ ಆ ಅವಧಿಯಲ್ಲೂ ಸಹ ಅವರು ಆಸ್ತಿ ವಿವರಗಳನ್ನು ಸಲ್ಲಿಸಲಿಲ್ಲ ಎಂಬ ಅಂಶಗಳನ್ನು ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.