ಕಲಬುರಗಿ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಫಲವಾಗಿ ಭಾರತ ದೇಶಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕರೆ ಹೈದರಾಬಾದ್ ಪ್ರಾಂತ್ಯಕ್ಕೆ ಒಂದು ವರ್ಷ ತಡವಾಗಿ ಅಂದರೆ 1948ರ ಸೆಪ್ಟೆಂಬರ್ 17 ರಂದು ಸ್ವಾತಂತ್ರ್ಯ ದೊರೆಯಿತು. ಆಗಿನ ಹೈದರಾಬಾದ್ ಕರ್ನಾಟಕ ಹಾಗೂ ಈಗ ಮರು ನಾಮಕರಣಗೊಂಡಿರುವ ಕಲ್ಯಾಣ ಕರ್ನಾಟಕ ವಿಮೋಚನೆಗೂ ಸಾಕಷ್ಟು ರಕ್ತ - ಸಿಕ್ತವಾದ ಇತಿಹಾಸವಿದೆ.
1947ರ ಅ.15 ರಂದು ಭಾರತ ದೇಶ ಸ್ವತಂತ್ರವಾಯಿತು. ದೇಶದ ಹಲವು ರಾಜರು ಭಾರತದ ಒಕ್ಕೂಟಕ್ಕೆ ತಮ್ಮ ರಾಜ್ಯವನ್ನು ಸೇರಿಸಿದರು. ಹೈದರಾಬಾದ್ ಪ್ರಾಂತ್ಯದ ರಾಜ ನಿಜಾಮ ಭಾರತದ ಒಕ್ಕೂಟಕ್ಕೆ ಸೇರಲು ಒಪ್ಪದೇ ಸ್ವತಂತ್ರ ಆಡಳಿತ ನಡೆಸುವುದಾಗಿ ಘೋಷಿಸಿಕೊಂಡಿದ್ದ.
ಇದರಿಂದಾಗಿ ಹೈದರಾಬಾದ್ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಸ್ವತಂತ್ರವಾಗಲಿಲ್ಲ. ನಿಜಾಮನ ನಿರ್ಧಾರ ಹೈದರಾಬಾದ್ ಪ್ರಾಂತ್ಯದ ಜನರನ್ನು ರೊಚ್ಚಿಗೆಬ್ಬಿಸಿತು. ಭಾರತ ಒಕ್ಕೂಟಕ್ಕೆ ಸೇರಿಸಲು ಈ ಭಾಗದಲ್ಲಿ ಮತ್ತೊಂದು ಸ್ವಾತಂತ್ರ್ಯದ ಚಳುವಳಿ ನಡೆಯಿತು. ಇಲ್ಲಿಯೂ ಸಾಕಷ್ಟು ಜೀವಗಳು ಬಲಿಯಾದವು.
ರಜಾಕರ ಪಡೆ ಪ್ರವೇಶ:ಈ ಭಾಗದ ಬಹುತೇಕರು ಭಾರತದ ಒಕ್ಕೂಟ ಸೇರುವ ಬಯಕೆ ಹೊಂದಿದ್ದರು. ಹೋರಾಟ ಕೂಡಾ ನಡೆಸಿದ್ದರು. ಅವರ ಕೂಗು ಹತ್ತಿಕ್ಕಲು, ಹೋರಾಟ ಬಗ್ಗು ಬಡಿಯಲು ನಿಜಾಮ ತನ್ನ ಖಾಸಗಿ ಸೈನ್ಯ ರಜಾಕರ ಪಡೆ ಸಜ್ಜುಗೊಳಿಸಿದನು. ವಿಮೋಚನಾ ಹೋರಾಟ ಹತ್ತಿಕ್ಕಲು ತನ್ನ ಬಲಗೈ ಬಂಟ ಖಾಸಿಂ ರಜ್ವಿ ಎಂಬ ಮತಾಂಧನಿಗೆ ನಿಜಾಮ ಸಂಪೂರ್ಣ ಸ್ವತಂತ್ರ ನೀಡಿದ.
1947ರ ಜುಲೈ ತಿಂಗಳಲ್ಲಿ ನಿಜಾಮ, ಹೋರಾಟನಿರತರ ಬಂಧನಕ್ಕೆ ಆದೇಶ ಹೊರಡಿಸಿದ. ಸ್ವಾತಂತ್ರ್ಯ ಸೇನಾನಿಗಳನ್ನು ಬಂಧಿಸಿ ನಿಜಾಮನ ಸಾರ್ವಭೌಮತ್ವ ಸಂರಕ್ಷಿಸುವ ಜವಾಬ್ದಾರಿ ಹೊತ್ತ ರಜಾಕಾರರು ಮೂರು ಸಾವಿರಕ್ಕೂ ಹೆಚ್ಚು ಹೋರಾಟಗಾರರನ್ನು ಬಂಧಿಸಿ ಜೈಲಿಗೆ ಹಾಕಿದರು. ಜೈಲುಗಳು ತುಂಬಿ ಹೋದವು. ನಿಜಾಮನ ಈ ನಿರ್ಧಾರ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಯ್ತು. ಆಗ ಸಮಾರೋಪಾದಿಯಲ್ಲಿ ಜನರು ವಿಮೋಚನಾ ಚಳವಳಿಗೆ ಧುಮುಕಿದರು. ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ಚಳವಳಿಗಳು ನಡೆದವು.
ಹಬ್ಬದ ಹೆಸರಲ್ಲಿ ಜನರನ್ನು ಸೇರಿಸಿದ ಹೋರಾಟಗಾರರು:ನಿಜಾಮನ ರಜಾಕರ ಪಡೆ ವಿರುದ್ಧ ಹೋರಾಟ ತೀವ್ರ ಗತಿಯಾಯಿತು. ಕಲಬುರಗಿಯ ಕೊಲ್ಲೂರು ಮಲ್ಲಪ್ಪ, ಚಂದ್ರಶೇಖರ್ ಪಾಟೀಲ, ಡಿ.ಆರ್.ಅವರಾದಿ, ಜಗನ್ನಾಥ್ ರಾವ್ ಚಂಡ್ರಕಿ, ಚಟ್ನಹಳ್ಳಿ ವೀರಣ್ಣ, ಬೀದರ್ ಜಿಲ್ಲೆಯ ಎಸ್.ಬಿ.ಅವದಾನಿ, ಯಾದಗಿರಿಯ ವಿಶ್ವನಾಥ ರೆಡ್ಡಿ ಮುದ್ನಾಳ, ಕೊಪ್ಪಳದ ಜೆ.ಕೆ.ಪ್ರಾಣೇಶಾಚಾರ್, ಬಂಗಾರಶೆಟ್ಟಿ, ಚಿಟಗುಪ್ಪದ ಹಕೀಕತರಾವ್ ಸೇರಿದಂತೆ ಮೊದಲಾದವರು ಹೋರಾಟ ನಡೆಸಿದರು.
ಸಾಕಷ್ಟು ಬಾರಿ ಬಂಧನಕ್ಕೊಳಗಾಗಿ ಜೈಲು ಸೇರಿ ರಜಾಕರಿಂದ ಏಟು ತಿಂದರು. ಆದರು ಹೋರಾಟ ಮಾತ್ರ ಕೈಬಿಡಲಿಲ್ಲ. ಅಲ್ಲದೇ, ಗಣೇಶೋತ್ಸವ, ವಿಜಯ ದಶಮಿ ಹಬ್ಬಗಳ ನೆಪದಲ್ಲಿ ಜನರನ್ನು ಒಂದೆಡೆ ಸೇರಿಸಿ ವಿಮೋಚನೆಯ ಬಗ್ಗೆ ಜನರಿಗೆ ತಿಳಿಹೇಳುವ ಕೆಲಸ ಮಾಡುತ್ತಿದ್ದರು.
ಮರೆಯಲಾಗದ ಗೋರ್ಟಾ ಹತ್ಯಾಕಾಂಡ: ಹೈದರಾಬಾದ ವಿಮೋಚನಾ ಹೋರಾಟದಲ್ಲಿ ಪ್ರಮುಖ ಘಟ್ಟವಾಗಿರುವುದು 1948ರ ಮೇ 9ರಂದು ಬೀದರ್ ಜಿಲ್ಲೆಯ ಗೋರ್ಟಾ ಗ್ರಾಮದಲ್ಲಿ ನಡೆದ ಸ್ವಾತಂತ್ರ್ಯ ಸೇನಾನಿಗಳ ಹತ್ಯಾಕಾಂಡ. ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಬಾವುರಾವ ಪಾಟೀಲ ಹಾಗೂ ವಿಠೋಬಾ ನಿರೋಡೆ ಗೋರ್ಟಾ ಗ್ರಾಮದಲ್ಲಿ ರಾಷ್ಟ್ರದ ತ್ರಿವರ್ಣ ಧ್ವಜ ಹಾರಿಸಿದ್ದರು.
ಈ ವೇಳೆ, ರಜಾಕರರ ಸಹಪಾಠಿ ಆ ಧ್ವಜ ಇಳಿಸಿದ್ದಲ್ಲದೇ ಬಾವುರಾವ ಪಾಟೀಲರಿಗೆ ಅವಮಾನ ಮಾಡಿದ್ದರು. ಅಲ್ಲದೇ, ಪಾಟೀಲರ ಮನೆ ಲೂಟಿ ಮಾಡಿದರು. ಅವಮಾನ, ಮನೆ ಲೂಟಿಯಿಂದ ಆಕ್ರೋಶಗೊಂಡ ಬಾವುರಾವ ಪಾಟೀಲ, ರಜಾಕರರ ಸಹಪಾಠಿ ಇಸಾಮುದ್ದೀನನ್ನು ಕೊಂದು ಹಾಕಿದ್ದರು. ಇತ್ತ ಇಸಾಮುದ್ದೀನ್ ಕೊಲೆ ರಜಾಕರರನ್ನು ಕೆರಳಿಸಿತು.