ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣದಲ್ಲಿ ರಾತ್ರಿ ಸಮಯ ವಿಮಾನಗಳ ಲ್ಯಾಂಡಿಂಗ್‌ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅನುಮತಿ ನೀಡಿದೆ. ಈವರೆಗೆ ನಿಲ್ದಾಣ ಮುಂಜಾನೆಯಿಂದ ಸಂಜೆಯವರೆಗೆ ಮಾತ್ರ ಕಾರ್ಯ ನಿರ್ವಹಿಸುತ್ತಿತ್ತು.
ವಿಮಾನ ನಿಲ್ದಾಣ ನಿರ್ದೇಶಕರ ಪ್ರತಿಕ್ರಿಯೆ: "ರನ್ ವೇ 27 ರ ಸಮೀಪದಲ್ಲಿ ಯಾವುದೇ ಸಂಭಾವ್ಯ ಎತ್ತರದ ನಿರ್ಬಂಧಗಳಿಲ್ಲದ ಕಾರಣ ಡಿಜಿಸಿಎ ರಾತ್ರಿ ಲ್ಯಾಂಡಿಂಗ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈ ರನ್‍ವೇ ಥ್ರೆಶೋಲ್ಡ್ ಶಿಫ್ಟ್ ಕೈಗೊಳ್ಳಲು ಸೂಚಿಸಿದೆ. ರಾತ್ರಿ ಲ್ಯಾಂಡಿಂಗ್‍ಗೆ ಅನುಮತಿ ಪಡೆಯಲು ಶ್ರಮಿಸಿದ ಎಲ್ಲ ಇಲಾಖೆಗಳ ಅವಿರತ ಪ್ರಯತ್ನಗಳಿಗೆ ಧನ್ಯವಾದಗಳು" ಎಂದು ಕಲಬುರಗಿ ವಿಮಾನ ನಿಲ್ದಾಣ ನಿರ್ದೇಶಕ ಡಾ.ಚಿಲಕ ಮಹೇಶ್ ಗುರುವಾರ ತಿಳಿಸಿದ್ದಾರೆ.
ನೈಟ್ ಲ್ಯಾಂಡಿಂಗ್ ಸೌಲಭ್ಯಕ್ಕೆ ಸಂಸದ ಉಮೇಶ್ ಜಾಧವ್ ಸಂತಸ: "ನಾಗರಿಕ ವಿಮಾನಯಾನ ಸಚಿವಾಲಯದಡಿಯಲ್ಲಿ ಬರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಅಧಿಕೃತವಾಗಿ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯ ಪೂರ್ಣಗೊಂಡಿದೆ ಎಂದು ಪ್ರಮಾಣೀಕರಿಸಿದೆ. ಈ ಸೌಲಭ್ಯದಿಂದ ಮುಂಬರುವ ದಿನಗಳಲ್ಲಿ ಹಲವಾರು ವಿಮಾನಯಾನ ಸಂಸ್ಥೆಗಳು ಕಲಬುರಗಿಯಿಂದ ದೇಶದ ವಿವಿಧ ಕಡೆಗಳಿಗೆ ವಿಮಾನ ಸೇವೆ ಆರಂಭಿಸಲಿವೆ. ಈ ನಿಟ್ಟಿನಲ್ಲಿ ಇದು ಮಹತ್ವಪೂರ್ಣ ಹೆಜ್ಜೆಯಾಗಿದೆ".
"ಸುಮಾರು ಎರಡು ವರ್ಷಗಳ ಹಿಂದೆಯೇ ಪೂರ್ಣಗೊಳ್ಳಬೇಕಾಗಿದ್ದ ಈ ಸೌಲಭ್ಯವು ಕೋವಿಡ್ 19 ಹಾಗೂ ಇತರೆ ಕಾರಣಗಳಿಂದ ವಿಳಂಬವಾಗಿತ್ತು. ಇದರ ಬಗ್ಗೆ ನಾನು ಹಲವಾರು ಬಾರಿ ಲೋಕಸಭೆಯಲ್ಲಿ ಪ್ರಶ್ನೆ ಕೇಳುವ ಮೂಲಕ ಹಾಗೂ ಲಿಖಿತವಾಗಿ ಪತ್ರ ಬರೆಯುವ ಮೂಲಕ ಕೇಂದ್ರದ ಸಚಿವರ ಗಮನಕ್ಕೆ ತಂದಿದ್ದೇನೆ. ಅದರ ಪ್ರತಿಫಲವಾಗಿ ಇದೀಗ ನೈಟ್ ಲ್ಯಾಂಡಿಂಗ್ ಸೌಲಭ್ಯ ಪೂರ್ಣಗೊಂಡಿದೆ. ಇದು ಸಂತಸ ತಂದಿದೆ. ಶೀಘ್ರದಲ್ಲಿಯೇ ಕೇಂದ್ರ ಸಚಿವರು ಭೇಟಿ ನೀಡಿ ವಿಮಾನಯಾನ ಸಂಸ್ಥೆಗಳಿಗೆ ಕಲಬುರಗಿಯಿಂದ ಸೇವೆ ಪ್ರಾರಂಭಿಸಲು ಕೋರುತ್ತೇನೆ" ಎಂದು ತಿಳಿಸಿದ್ದಾರೆ.